ಉಡುಪಿ, ಜ.07 (DaijiworldNews/PY): "ಕೇಂದ್ರ, ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿಲ್ಲದ ಈ ಪ್ರತಿಕೂಲ ಸಂದರ್ಭದಲ್ಲೂ ಕೂಡಾ ಇತ್ತೀಚೆಗೆ ಜರುಗಿದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ. ಈ ಮೂಲಕ ಬಿಜೆಪಿ ಆಡಳಿತಕ್ಕೆ ಪ್ರತಿಭಟನಾ ರೂಪದಲ್ಲಿ ಉತ್ತರವನ್ನು ಕೊಟ್ಟಿದೆ. ಇದಕ್ಕೆ ನಮ್ಮ ಕಾರ್ಯಕರ್ತರ ಶ್ರಮ ಕಾರಣ. ವಿರೋಧ ಪಕ್ಷಗಳ ಹಣದ ಹೊಳೆಯ ಎದುರು ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಇಂತಹ ಸಾಧನೆ ಮಾಡಿದ್ದು ಪಕ್ಷಕ್ಕೆ ನೈತಿಕ ಸ್ಥೈರ್ಯವನ್ನು ಕೊಟ್ಟಿದೆ" ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಜರುಗಿದ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
"ಈ ಸಾಧನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡು ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ನಾವು ಸಂಘಟಿತರಾಗೋಣ. ಕ್ಷೇತ್ರದ ಮತ್ತು ಜನರ ಸೇವೆಯೇ ಮುಖ್ಯ ಗುರಿಯಾಗಿಸಿಕೊಂಡು ನಾವು ದುಡಿಯೋಣ. ಆಯ್ಕೆಯಾದ ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳೆಲ್ಲರೂ ಕೂಡಾ ನಮ್ಮ ಪಕ್ಷಕ್ಕೆ ಪಂಚಾಯತ್ ಸದಸ್ಯರೇ. ಈ ಭಾರಿ ಯಶಸ್ವಿಯಾಗದ ಅಭ್ಯರ್ಥಿಗಳು ಮುಂದಿನ ಬಾರಿ ಯಶಸ್ವಿಯಾಗಬಹುದು. ಆ ನಿಟ್ಟಿನಲ್ಲಿ ನಾವು ಕೆಲಸ ಕಾರ್ಯಗಳನ್ನು ಮಾಡೋಣ. ನಮ್ಮ ಪಕ್ಷದ ಯುವ ಪಡೆಯನ್ನು ಜಾಗೃತಗೊಳಿಸೋಣ. ಇದಕ್ಕೆ ಈ ಚುನಾವಣೆ ನಾಂದಿಯಾಗಲಿ" ಎಂದರು.
"ಗ್ರಾಮ ಪಂಚಾಯತ್ ಚುನಾವಣೆ ಎನ್ನುವುದು ಕಾರ್ಯಕರ್ತರ ಚುನಾವಣೆ ಈ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಪಕ್ಷದ ಬುನಾದಿ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಭೂತಪೂರ್ವವಾಗಿ ಯಶಸ್ವಿಯಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗೋಣ. ನಾವು ಪ್ರತಿಪಾದಿಸಿದ ಜನಪರ ನೀತಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸೋಣ" ಎಂದು ಕಾಪು ಬ್ಲಾಕ್ ಉತ್ತರ ವಲಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಮಾತನಾಡಿ ಚುನಾವಣೆಯಲ್ಲಿ ಸಹಕರಿಸಿದವರಿಗೆ ಧನ್ಯವಾದವನ್ನು ಅರ್ಪಿಸುತ್ತಾ, "ಗೆದ್ದ 13 ಅಭ್ಯರ್ಥಿಗಳು ಒಗ್ಗಟ್ಟಾಗಿ ಪಂಚಾಯತ್ ಆಡಳಿತದಲ್ಲಿ ಭಾಗಿಗಳಾಗಿ ಊರಿಗೆ ಮತ್ತು ಪಕ್ಷಕ್ಕೆ ನಿಷ್ಟರಾಗಿರಿ" ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿ ಸ್ಪರ್ಧಿಸಿದ ಮೂವತ್ತೂ ಅಭ್ಯರ್ಥಿಗಳಿಗೆ ಮಾಜಿ ಸಚಿವರು ಹಾರ ಮತ್ತು ಶಾಲು ಹಾಕಿ ಅಭಿನಂದಿಸಿದರು.
ಪ್ರಾರಂಭದಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ಸ್ವಾಗತಿಸಿದ ಹಿರಿಯ ಮುಖಂಡ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ರೋಯ್ಸ್ ಮರ್ವಿನ್ ಫೆರ್ನಾಂಡಿಸ್ ವಂದಿಸಿದರು.