ಮಂಗಳೂರು, ಜ. 08 (DaijiworldNews/MB) : ನಗರದ ಪೊಲೀಸರು ಗುರುವಾರ ಜನವರಿ 7 ರಂದು ನಗರದ ಕಡಲತೀರಗಳಲ್ಲಿ ಸುತ್ತಾಡಿ ತೊಂದರೆ ಸೃಷ್ಟಿಸುತ್ತಿದ್ದ 70 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದರು. ಹಾಗೆಯೇ ಹಲವಾರು ವಾಹನಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.

'ಆಪರೇಷನ್ ಸುರಕ್ಷ'ದ ಅಂಗವಾಗಿ, ಪೊಲೀಸರು ನಾಲ್ಕು ಪ್ರಮುಖ ಕಡಲತೀರಗಳಲ್ಲಿ ಕಾರ್ಯಾಚರಣೆ ನಡೆಸಿದ್ದು ಅನೇಕ ಜನರು ಮದ್ಯ ಸೇವಿಸಿ ಉಪದ್ರವ ಮಾಡುತ್ತಿರುವುದನ್ನು ಗಮನಿಸಿದರು. ಸ್ಥಳೀಯರ ದೂರುಗಳ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದ್ದು ಎಸಿಪಿ ಮತ್ತು ಡಿಸಿಪಿ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸುಮಾರು 20 ತಂಡಗಳು ಈ ಕಾರ್ಯಾಚರಣೆಯಲ್ಲಿ ಇದ್ದರು.
70 ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಐದಾರು ಜನರನ್ನು ಹೊರತುಪಡಿಸಿ, ಉಳಿದೆಲ್ಲರೂ ಮದ್ಯ ಸೇವಿಸುತ್ತಿದ್ದರು ಎಂದು ಹೇಳಲಾಗಿದೆ.
ಇನ್ನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಪೆಡ್ಲಿಂಗ್ ವಿಚಾರದಲ್ಲಿ ಒಂದು ಎಫ್ಐಆರ್ ದಾಖಲಾಗಿದ್ದು ಆರೋಪಿಗಳಿಂದ ಒಂದು ಚಾಕು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ದಾಖಲೆಗಳ ಪರಿಶೀಲನೆಗಾಗಿ 17 ಬೈಕ್ಗಳು ಮತ್ತು 7 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 12 ಬೈಕ್ಗಳು ಮತ್ತು ಎರಡು ಕಾರುಗಳು ಬಾಕಿ ಉಳಿದಿವೆ. ಇನ್ನು ಕೆಲವು ಬೈಕು ಮಾಲೀಕರ ವಿರುದ್ದ 10 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿದೆ.
ಮದ್ಯ ಸೇವಿಸಿದ್ದ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದ್ದು ಅವರ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಈ ರೀತಿಯ ಅಪರಾಧಗಳು ಮತ್ತೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.