ಉಡುಪಿ, ಜೂ27: ಬಸ್ಸು ಕಂಡಕ್ಟರ್ ಸಮಯ ಪ್ರಜ್ಞೆಯಿಂದ ತುಂಗಾ ನದಿಯ ನೀರು ಪಾಲಾಗುತ್ತಿದ್ದ ಸುಮಾರು 25 ಮಂದಿ ಪ್ರಯಾಣಿಕರು ಮರುಜೀವ ಪಡೆದುಕೊಂಡ ಘಟನೆ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯ ಮಂಡಗದ್ದೆಯಲ್ಲಿ ನಡೆದಿದೆ.
ಶಿವಮೊಗ್ಗದಿಂದ ಮಂಗಳೂರಿಗೆ ಹೊರಟಿದ್ದ ಕ್ರಿಸ್ತರಾಜ ಬಸ್ ಮಂಡಗದ್ದೆಯ 17 ನೇ ಮೈಲಿಕಲ್ಲಿನ ಸಮೀಪ ಡ್ರೈವರ್ ಗೆ ತಲೆ ಸುತ್ತು ಬಂದು ಚಾಲಕನ ನಿಯಂತ್ರಣ ತಪ್ಪಿತ್ತು. ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ತುಂಬಿ ಹರಿಯುತ್ತಿದ್ದ ತುಂಗೆಯ ಒಡಲು ಸೇರಬೇಕಾಗಿತ್ತು. ಆದರೆ, ಬಸ್ಸಿನ ಕಂಡಕ್ಟರ್ ಭಗವಾನ್ ಸಮಯ ಪ್ರಜ್ಞೆಯಿಂದಾಗಿ ಸುಮಾರು 25 ಮಂದಿ ಪ್ರಯಾಣಿಕರ ಜೀವ ಉಳಿದಿದೆ.
ಕ್ರಿಸ್ತರಾಜ ಬಸ್ ಮಂಡಗದ್ದೆ ಸಮೀಪದ 17ನೇ ಮೈಲುಗಲ್ಲು ಬಳಿ ಬಂದಾಗ ಬಸ್ಸಿನ ಚಾಲಕ ಅಪ್ಸರ್ ಅವರಿಗೆ ತಲೆಸುತ್ತು ಬಂದಿತ್ತು. ಈ ವೇಳೆ ಅಪ್ಸರ್ ಬಸ್ ಸ್ಟೈರಿಂಗ್ ಕೈ ಬಿಟ್ಟಿದ್ದಾರೆ. ಬಸ್ಸಿನಲ್ಲಿ ಟಿಕೆಟ್ ಮಾಡಿ ಮುಗಿಸಿದ್ದ ಕಂಡಕ್ಟರ್ ಭಗವಾನ್ ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು. ತಕ್ಷಣ ಭಗವಾನ್ ಡ್ರೈವರ್ ಪರಿಸ್ಥಿತಿ ನೋಡಿ ಸ್ಟೈರಿಂಗ್ ತಿರುಗಿಸಿ ತುಂಗಾ ನದಿ ಕಡೆ ಹೋಗುತ್ತಿದ್ದ ಬಸ್ ತಿರುಗಿಸಿದ್ದಾರೆ. ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಇದೀಗ ಕಂಡೆಕ್ಟರ್ ಭಗವಾನ್ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.