ಮಂಗಳೂರು, ಜ. 08 (DaijiworldNews/MB) : ''ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಸ್ವಚ್ಛ ಭಾರತ್ ಮಿಷನ್ ನಿಷ್ಕ್ರಿಯವಾಗಿದೆ. ಸ್ವಚ್ಛತೆಯ ವಿಚಾರದಲ್ಲಿ ಪ್ರಸ್ತುತ ಮಂಗಳೂರಿನ ಪರಿಸ್ಥಿತಿ ಹದಗೆಟ್ಟಿದೆ'' ಎಂದು ಮಾಜಿ ಶಾಸಕ ಜೆ ಆರ್ ಲೋಬೊ ಆರೋಪಿಸಿದ್ದಾರೆ.


ಜನವರಿ 8 ಶುಕ್ರವಾರದಂದು ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜೆ ಆರ್ ಲೋಬೊ ಅವರು, ''ಮಂಗಳೂರು ಒಂದು ಕಾಲದಲ್ಲಿ ಸ್ವಚ್ಛತೆಗೆ ಹೆಸರುವಾಸಿಯಾಗಿತ್ತು. ಸ್ವಚ್ಛತೆ ವಿಚಾರದಲ್ಲಿ ಈ ಹಿಂದೆ ಮಂಗಳೂರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿತ್ತು. ಆದರೆ ಸ್ವಚ್ಛತೆಯ ವಿಚಾರದಲ್ಲಿ ಪ್ರಸ್ತುತ ಮಂಗಳೂರಿನ ಪರಿಸ್ಥಿತಿ ಹದಗೆಟ್ಟಿದೆ'' ಎಂದು ದೂರಿದರು.
''ನಗರದ ಮೂಲೆ ಮೂಲೆಯಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಸರಿಯಾದ ತ್ಯಾಜ್ಯ ವಿಲೇವಾರಿ ವಿಧಾನವನ್ನು ಜಾರಿಗೆ ತರುತ್ತಿಲ್ಲ. ತ್ಯಾಜ್ಯವನ್ನು ನಿಯಮಿತವಾಗಿ ಸಂಗ್ರಹಿಸುತ್ತಿಲ್ಲ ಎಂಬುದನ್ನು ನಾವು ಗಮನಿಸಬಹುದಾಗಿದೆ. ಈ ಹಿಂದೆ ಸ್ವಚ್ಛತೆಯಲ್ಲಿ ಮಂಗಳೂರು ಮುಂಚೂಣಿಯಲ್ಲಿತ್ತು, ಆದರೆ ಈಗ ಇಲ್ಲ'' ಎಂದು ಹೇಳಿದರು.
''ತ್ಯಾಜ್ಯ ಸಂಗ್ರಹಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸಡ್ಡೆ ತ್ಯಾಜ್ಯ ವಿಲೇವಾರಿ ವಿಧಾನಗಳ ನಡುವೆಯೇ ಬೀದಿ ನಾಯಿಗಳು ಕೂಡಾ ತ್ಯಾಜ್ಯ ವಿಲೇವಾರಿಯ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಿದೆ. ಈ ರೀತಿಯ ಕೆಟ್ಟ ಪರಿಸ್ಥಿತಿಯನ್ನು ನಾವು ಈ ಹಿಂದೆ ನೋಡಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಕೆಲವು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಲಾಗಿತ್ತು. ಆದರೆ ಈ ರೀತಿಯ ಕೆಟ್ಟ ಪರಿಸ್ಥಿತಿ ಎಂದಿಗೂ ಬಂದಿಲ್ಲ'' ಎಂದರು.
''ಮಂಗಳೂರು ನಗರ ಪಾಲಿಕೆಯು (ಎಂಸಿಸಿ) ಹಣವಿಲ್ಲ ಎಂದು ಹೇಳುತ್ತದೆ. ನಗರದಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷ ಕುಟುಂಬಗಳಿವೆ. ಸರಾಸರಿ 5 ಕೋಟಿ ರೂ.ಗಳ ತೆರಿಗೆ ಸಂಗ್ರಹ ಮಾಡಬೇಕಾಗಿದೆ. ಮಾಡಿಲ್ಲವೆಂದರೆ ಅದು ಆಡಳಿತದ ವೈಫಲ್ಯ'' ಎಂದರು.
ಕಾರ್ಪೋರೇಟರ್ ಶಶಿಧರ್ ಹೆಗ್ಡೆ, ಎಂಸಿಸಿ ವಿರೋಧ ಪಕ್ಷದ ನಾಯಕ ಅಬ್ದುಲ್ ರಾವೂಫ್ ಮತ್ತು ಇತರರು ಉಪಸ್ಥಿತರಿದ್ದರು.