ಮಂಗಳೂರು, ಜ.08 (DaijiworldNews/PY): ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಜ.8ರ ಶುಕ್ರವಾರದಂದು ಕೊರೊನಾ ವ್ಯಾಕ್ಸಿನೇಷನ್ ಡ್ರೈರನ್ ನಡೆಸಲಾಯಿತು.






ಮಂಗಳೂರು









ಉಡುಪಿ
ವೆನ್ಲಾಕ್ನ ಆಯುಷ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ ಡ್ರೈರನ್ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, "ಕೊರೊನಾ ಲಸಿಕೆಯ ಡ್ರೈರನ್ನಿಂದ ಸಾರ್ವಜನಿಕರಲ್ಲಿರುವ ಗೊಂದಲ ನಿವಾರಣೆಯಾಗುತ್ತದೆ. ಮೊದಲ ಹಂತದ ಲಸಿಕೆಯನ್ನು ಕೊರೊನಾ ವಾರಿಯರ್ಗಳಿಗೆ ನೀಡಲಾಗುವುದು. ಎರಡನೇ ಹಾಗೂ ಮೂರನೇ ಹಂತದತ್ತ ಗಮನಹರಿಸಬೇಕಿದೆ" ಎಂದು ಹೇಳಿದರು.
"ಮೊದಲ ಹಂತದಲ್ಲಿ ಕೊರೊನಾ ಲಸಿಕೆ ನೀಡುವಾಗ ರೋಗಿಗಳಿಗೆ ಮಧುಮೇಹ ಅಥವಾ ಇನ್ಯಾವುದೇ ಕಾಯಿಲೆಗಳು ಇವೆಯೇ ಎನ್ನುವ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಲಸಿಕೆ ನೀಡುವ ಸ್ಥಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕು" ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರ ಹಾಗೂ ಅಂಗಡಿಯವರ ವಿರುದ್ದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸದ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ವೇಳೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದರ ಬಾಯರಿ ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಶುಕ್ರವಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ, ಹಾಜಿ ಅಬ್ದುಲ್ಲಾ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಡ್ರೈರನ್ ಅನ್ನು ಪ್ರಾರಂಭಿಸಿದರು.
ಕಾರ್ಯಕ್ರಮವನ್ನು ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖಾ ವತಿಯಿಂದ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಡಿಸಿ ಜಿ.ಜಗದೀಶ್ ಅವರು, "ನಾವು ಈ ಕಾರ್ಯವನ್ನು ಇತ್ತೀಚಿನ ಚುನಾವಣಾ ಪ್ರಕ್ರಿಯೆಯಂತೆ ಕಟ್ಟಿನಿಟ್ಟಾಗಿ ಮಾಡುತ್ತೇವೆ. ಕೊರೊನಾ ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಶ್ರಮಿಸಬೇಕು. ಇದಕ್ಕಾಗಿ ಎಲ್ಲವನ್ನು ಸಿದ್ದಪಡಿಸಲಾಗಿದೆ. ಜಿಲ್ಲೆಯಲ್ಲಿ ಎಂಟು ವ್ಯಾಕ್ಸಿನೇಷನ್ ಕೇಂದ್ರಗಳಿವೆ. ಈ ಪ್ರಯೋಗಕ್ಕಾಗಿ ನಮ್ಮನ್ನು ನಾವು ಸಿದ್ದಪಡಿಸಿಕೊಳ್ಳುತ್ತಿದ್ದೇವೆ. ನಮ್ಮ ಗುರಿಯನ್ನು ತಲುಪಲು ನಾವು ಗಂಭೀರವಾಗಿ ಕೆಲಸ ಮಾಡುತ್ತೇವೆ. ಕೇಂದ್ರದಲ್ಲಿ ನಾಲ್ಕು ವ್ಯಾಕ್ಸಿನೇಷನ್ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಇರುತ್ತಾರೆ" ಎಂದರು.
"ಕೊರೊನಾ ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ನಂಬಬೇಡಿ. ಪ್ರತಿ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ" ಎಂದು ಹೇಳಿದರು.
ಡಿಎಚ್ಒ ಡಾ.ಸುಧೀರ್ ಚಂದ್ರ ಅವರು ಮಾತನಾಡಿ, "ಕೇಂದ್ರದಲ್ಲಿ ಎಂಟು ವ್ಯಾಕ್ಸಿನೇಷನ್ ಕೇಂದ್ರಗಳಿದ್ದು, ಅವುಗಳಲ್ಲಿ ಆರು ಸರ್ಕಾರಿ ಮತ್ತು ಎರಡು ಖಾಸಗಿ ಕೇಂದ್ರಗಳಾಗಿವೆ. 852 ಆಸ್ಪತ್ರೆಗಳಲ್ಲಿ 19,568 ಫಲಾನುಭವಿಗಳಿದ್ದಾರೆ. ನಾವು 260 ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ. ಅಗತ್ಯವಾದ ಉಪಕರಣಗಳನ್ನು ಒದಗಿಸಲಾಗಿದೆ" ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಧುಸೂಧನ್ ನಾಯಕ್, ಜಿಲ್ಲಾ ಕೊರೊನಾ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಕೊರೊನಾ ವ್ಯಾಕ್ಸಿನೇಷನ್ ಅಧಿಕಾರಿ ಡಾ.ರಾಮ ಹಾಗೂ ಮತ್ತಿತರರು ಉಪಸ್ಥಿತರಿದ್ದರು.