ಮಂಗಳೂರು, ಜ 08 (DaijiworldNews/SM): ಬೈಕಂಪಾಡಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಸ್ಪ್ರಿಂಗ್ ಉತ್ಪಾದನಾ ಘಟಕದಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ತಕ್ಷಣ ಸ್ಥಳೀಯ ಎಂ ಸಿಎಫ್ ಮತ್ತು ಕದ್ರಿಯ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು ಬಹಳ ತ್ರಾಸದ ಬಳಿಕ ಬೆಂಕಿ ನಂದಿಸಿದ್ದಾರೆ. ಈ ಘಟಕದಲ್ಲಿ ಸುಮಾರು 90 ಸಾವಿರ ಲೀಟರ್ ಫರ್ನೆಸ್ ಆಯಿಲ್ ಸಂಗ್ರಹ ಇದೆ ಎನ್ನಲಾಗಿದ್ದು, ಅದೃಷ್ಟವಶಾತ್ ಅಗ್ನಿ ಜ್ವಾಲೆ ಅದಕ್ಕೆ ಹರಡಿಲ್ಲ. ಘಟನೆಯ ವೇಳೆ ರಾತ್ರಿ ಪಾಳಿ ಕಾರ್ಮಿಕರು ಕೆಲಸ ಮಾಡುತ್ತಿದ್ದು ವಿರಾಮದ ಕಾರಣ ಕೆಲವರು ಚಹಾಕ್ಕೆಂದು ಹೊರಗೆ ತೆರಳಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳಕ್ಕೆ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು. ಪಣಂಬೂರು ವಲಯ ಎಸಿಪಿ ಬೆಳ್ಳಿಯಪ್ಪ ನಿರ್ದೇಶನದಲ್ಲಿ ಪಣಂಬೂರು ಎಸ್ ಐ ಉಮೇಶ್ ಭದ್ರತೆ ಏರ್ಪಡಿಸಿದ್ದರು. ದ.ಕ ಜಿಲ್ಲೆಯಲ್ಲಿರುವ ಏಕೈಕ ಅತ್ಯಾಧುನಿಕ ಸ್ಪ್ರಿಂಗ್ ಉತ್ಪಾದನಾ ಘಟಕ ಇದಾಗಿದ್ದು ಆಧುನಿಕ ಮಾದರಿಯಲ್ಲಿ ಘಟಕ ಕಾರ್ಯ ನಿರ್ವಹಣೆ ಮಾಡುತ್ತಿತ್ತು.