ಮಂಗಳೂರು, ಜ.09 (DaijiworldNews/PY): ಮಂಜನಾಡಿ ಗ್ರಾಮದ ಆರಂಗಡಿ ಬಳಿ ಆರಕ್ಕೂ ಅಧಿಕ ಕಾಗೆಗಳು ನಿಗೂಢವಾಗಿ ಸತ್ತು ಬಿದ್ದಿದ್ದ ನಂತರ ಜನರು ಭಯಭೀತರಾಗಿದ್ದರು. ಪಕ್ಷಿಗಳ ಸಾವಿನ ಬಗ್ಗೆ ಕಾರಣ ಕಂಡುಹಿಡಿಯಲು ಮಾದರಿಗಳನ್ನು ಜ.5 ರಂದು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಗೆ ಕಳುಹಿಸಲಾಗಿತ್ತು.

ಜ.8ರ ಶುಕ್ರವಾರದಂದು ವರದಿ ಬಂದಿದ್ದು, ವರದಿಯಲ್ಲಿ ಹಕ್ಕಿ ಜ್ವರದ ಯಾವುದೇ ಲಕ್ಷಣಗಳಿಲ್ಲ ಎಂದು ದೃಢಪಟ್ಟಿದೆ.
ಮಂಜನಾಡಿ ಗ್ರಾಮದಲ್ಲಿ ಕಾಗೆಗಳು ಸತ್ತುಬಿದ್ದ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು.
ಮಂಜನಾಡಿ ಗ್ರಾಮದ ಅರಂಗಡಿ ಪ್ರದೇಶಕ್ಕೆ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಐದು ಕಾಗೆಗಳು ಸತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾಗೆಗಳ ಕಳೆಬರಹವನ್ನು ಗುಂಡಿ ತೋಡಿ ಹೂಳಲು ನಿರ್ದೇಶಿಸಲಾಗಿದೆ. ಹಾಗೂ ಸುತ್ತಲಿನ ಪ್ರದೇಶಕ್ಕೆ ಕೀಟನಾಶಕ ಸಿಂಪಡಿಸಲು ಸೂಚಿಸಲಾಗಿತ್ತು.