ಕುಂದಾಪುರ, ಜ.10 (DaijiworldNews/PY): ಕಾರುಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕುಂದಾಪುರ ಮೂಲದ ದಂಪತಿ ಸೇರಿದಂತೆ ಮೂವರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ರಂಗೇನಹಳ್ಳಿಯಲ್ಲಿ ಜ.9ರ ಶನಿವಾರ ನಡೆದಿದೆ.





ಕುಂದಾಪುರ ಕೋಡಿಯ ವೆಂಕರಣಮಣ ಶೇರಿಗಾರ್ ಅವರ ಪುತ್ರ, ಕಾರು ಚಾಲಕ ನಾಗೇಂದ್ರ ಶೇರಿಗಾರ್ (32) ಅವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಕೋಟೇಶ್ವರದ ನೇರಂಬಳ್ಳಿಯ ನಿವಾಸಿ ರಾಮಚಂದ್ರ ಶೇರಿಗಾರ್ ಹಾಗೂ ಅವರ ಪುತ್ರ ಅನಿಲ್ ಶೇರಿಗಾರ್ (35) ಹಾಗೂ ಅವರ ಪತ್ನಿ ಸುಜಿತಾ (29) ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಾಕಾರಿಯಾದೇ ಸಾವನ್ನಪ್ಪಿದ್ದಾರೆ. ಮೃತ ದಂಪತಿಗಳ ಮಗಳಾದ ಒಂದೂವರೆ ವರ್ಷದ ಪುತ್ರಿ ಕನ್ನಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಶನಿವಾರ ನಾಗೇಂದ್ರ ಅವರು ತಮ್ಮ ಕಾರಿನಲ್ಲಿ ಸಂಬಂಧಿಕರಾದ ಅನಿಲ್, ಸುಜಿತಾ ಹಾಗೂ ಅವರ ಮಗು ಕನ್ನಿಕಾ ಜೊತೆ ಬೆಂಗಳೂರಿಗೆ ಹೊರಟ್ಟಿದ್ದರು. ಈ ವೇಳೆ ತರೀಕೆರೆಯ ರಂಗೇನಹಳ್ಳಿ ಸಮೀಪ ಎದುರಿನಿಂದ ಬಂದ ಕಾರಿನ ಜೊತೆ ನಾಗೇಂದ್ರ ಅವರು ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಇನ್ನೊಂದು ಕಾರಿನಲ್ಲಿದ್ದ ಕಿರಣ್ ಅವರ ಮೂಳೆ ಮುರಿದಿದ್ದು, ಅವರೊಂದಿಗಿದ್ದ ಅಶ್ವತ್ಥ್ ಹಾಗೂ ನಾಗರಾಜ್ ಅವರಿಗೆ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ.
ಬೆಂಗಳೂರಿನಲ್ಲಿ ನಾಗೇಂದ್ರ ಅವರು ಹೊಟೇಲ್ ಉದ್ಯಮಿಯಾಗಿದ್ದರು. ಕೋಡಿಯ ಜಟ್ಟಿಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಊರಿಗೆ ಬಂದಿದ್ದರು. ಅನಿಲ್ ಅವರು ಬೆಂಗಳೂರಿನಲ್ಲಿ ವಿದ್ಯುತ್ ಗುತ್ತಿದಾರರಾಗಿದ್ದು, ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಸಲುವಾಗಿ ಊರಿಗೆ ಬಂದಿದ್ದರು.
ಅನಿಲ್ ಹಾಗೂ ಸುಜಿತಾ ದಂಪತಿ ಶನಿವಾರ ರೈಲಿನಲ್ಲಿ ಕುಂದಾಪುರದಿಂದ ಬೆಂಗಳೂರಿಗೆ ಪ್ರಯಾಣಿಸಬೇಕಿತ್ತು. ಹಾಗಾಗಿ ಅವರು ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಿದ್ದರು. ಆದರೆ, ಸಂಬಂಧಿಕರಾದ ನಾಗೇಂದ್ರ ಅವರು ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಒಬ್ಬರೇ ಪ್ರಯಾಣಿಸುತ್ತಿದ್ದು, ಅವರ ಜೊತೆ ಅನಿಲ್ ಹಾಗೂ ಸುಜಿತಾ ಮಗುವಿನೊಂದಿಗೆ ಸೇರಿಕೊಂಡರು.
ಮೃತದೇಹಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಂದಾಪುರಕ್ಕೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.