ಮಂಗಳೂರು, ಜ.10 (DaijiworldNews/HR): ಜನಪ್ರತಿನಿಧಿಗಳ ಗಮನಕ್ಕೆ ತಂದು, ಪತ್ರಿಕೆಯಲ್ಲಿ ಸುದ್ದಿ ಬರೆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇದ್ದಾಗ ಸ್ವತಃ ಪತ್ರಕರ್ತರೇ ರಸ್ತೆಗಿಳಿದು ತಮ್ಮಿಂದಾದ ಅಳಿಲ ಸೇವೆ ಮಾಡಿದ್ದಾರೆ.


ಕೆಪಿಟಿ ಬಳಿ ಕದ್ರಿ ಠಾಣೆ ಎದುರಿನಿಂದಾಗಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸೇರುವ ತಿರುವಿನಲ್ಲಿ ರಸ್ತೆಯ ಅಡಿ ಭಾಗ ಕುಸಿತವಾಗಿದೆ. ಮೇಲ್ಭಾಗದಲ್ಲಿ ರಸ್ತೆ ಸುಂದರವಾಗಿದ್ದು, ಒಳಗಡೆ ಟೊಳ್ಳಾಗಿದೆ. ಕಾರು, ದ್ವಿಚಕ್ರ ವಾಹನ ಬದಿಯಲ್ಲಿ ಚಲಿಸಿದರೂ ಸುಮಾರು 10 ಅಡಿಯ ಕೊಳಚೆ ನೀರು ಹರಿಯುವ ಚರಂಡಿಗೆ ಬೀಳುವುದು ಖಚಿತ.
ಪತ್ರಕರ್ತ ಹರೀಶ್ ಮೋಟುಕಾನ ಮತ್ತು ಛಾಯಾಚಿತ್ರಗ್ರಾಹಕ ಸಂದೇಶ್ ಜಾರ ಅವರು ಪರಿಸರದಲ್ಲಿ ಓಡಾಡಿ ದೊಡ್ಡ ಗಾತ್ರದ ಕಲ್ಲುಗಳನ್ನು ತಂದು ವಾಹನಗಳು ರಸ್ತೆಯ ಅಂಚಿಗೆ ಬರದಂತೆ ಇಟ್ಟಿದ್ದಾರೆ. ಇಲ್ಲಿ ರಾತ್ರಿ ವೇಳೆಯಲ್ಲೂ ಉತ್ತಮ ಬೆಳಕಿನ ವ್ಯವಸ್ಥೆ ಇರುವುದರಿಂದ ಕಲ್ಲುಗಳು ದೂರದಿಂದಲೇ ಬದಿಗೆ ಬರದಂತೆ ಎಚ್ಚರಿಕೆ ನೀಡುತ್ತಿವೆ. ಪತ್ರಕರ್ತರ ಸಾಮಾಜಿಕ ಬದ್ಧತೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.