ಬೈಂದೂರು, ಜ.11 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಗಳಿಗೆ ಅನುಗುಣವಾಗಿ ಪ್ರಸ್ತುತ ಚೀನಾದ ಬದಲಾಗಿ ಮೀನುಗಾರಿಕಾ ದೋಣಿಗಳಿಗೆ ಭಾರತದಲ್ಲಿ ತಯಾರಿಸಿದ ಎಂಜಿನ್ಗಳನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಮೀನುಗಾರಿಕೆ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ ನಾವುಂದ ಶಾಖೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಕರಾವಳಿಯಲ್ಲಿ ಒಟ್ಟು 22,500 ಯಾಂತ್ರಿಕೃತ ಮೀನುಗಾರಿಕೆ ದೋಣಿಗಳು ಕಾರ್ಯನಿರ್ವಹಿಸುತ್ತಿವೆ.ಅವುಗಳಲ್ಲಿ 7,500 ಸಾಂಪ್ರದಾಯಿಕ ದೋಣಿಗಳಾಗಿದ್ದು, ಅವುಗಳಲ್ಲಿ ಒಂಭತ್ತು ದೋಣಿಗಳಿಗೆ ಎಚ್ಪಿ ಬೋರ್ಡ್ ಎಂಜಿನ್ಗಳನ್ನು ಅಳವಡಿಸಲಾಗಿದೆ. ದೊಡ್ಡ ದೋಣಿಗಳು 350 ಎಚ್ಪಿವರೆಗೆ ವಿಭಿನ್ನ ಶ್ರೇಣಿಯ ಎಂಜಿನ್ಗಳನ್ನು ಹೊಂದಿವೆ. ಅವುಗಳ ಪೈಕಿ ಶೇ.90ರಷ್ಟು ಬೋಟ್, ಯಂತ್ರೋ ಪಕರಣ ಹಾಗೂ ಎಂಜಿನ್ಗಳನ್ನು ವಿದೇಶಿ ಹಾಗೂ ಹೆಚ್ಚಾಗಿ ಚೀನಾ ನಿರ್ಮಿತ ಉಪಕರಣಗಳನ್ನು ಬಳಸಲಾಗುತ್ತಿದೆ. ಮೀನುಗಾರರು ಸ್ಥಳೀಯ ಉತ್ಪನ್ನಗಳನ್ನು ಬಳಸಲು ಒಲವು ತೋರುತ್ತಿದ್ದಾರೆ" ಎಂದಿದ್ದಾರೆ.
"ಇವುಗಳನ್ನು ಗಮನಿಸಿ ಸ್ವದೇಶಿ ನಿರ್ಮಿತ ಯಂತ್ರೋಪಕರಣ ಹಾಗೂ ಎಂಜಿನ್ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಸ್ವದೇಶಿ ನಿರ್ಮಿತ ಯಂತ್ರೋಪಕರಣಗಳನ್ನು ಬಳಸುವ ವಿಚಾರವಾಗಿ ಕಂಪೆನಿಯವರಿಗೆ ಸೂಚನೆ ನೀಡಲಾಗಿದೆ. ಗುಣಮಟ್ಟ ಹಾಗೂ ದರ ಸೂಕ್ತವೆಂದೆನಿಸಿದರೆ ಇದಕ್ಕೆ ಒಪ್ಪಿಕೊಳ್ಳಲು ಮೀನುಗಾರರು ಸಿದ್ದರಿದ್ದಾರೆ ಎನ್ನುವ ಬಗ್ಗೆ ತಿಳಿಸಿದ್ದಾರೆ. ಮೀನುಗಾರಿಕೆ ನಡೆಸುವ ಬೋಟ್ಗಳಿಗೆ ಡೀಸೆಲ್ ಬಳಕೆಯ ಬದಲಾಗಿ ಗ್ಯಾಸ್ ಬಳಕೆಗೆ ಹೆಚ್ಚು ಒತ್ತು ನೀಡಲು ತಿಳಿಸಲಾಗಿದೆ" ಎಂದಿದ್ದಾರೆ.
ಈ ಸಂದರ್ಭದಲ್ಲಿ ಸಚಿವರನ್ನು ಗೌರವಿಸಲಾಯಿತು.