ಜೂ,28 : ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು ಪರಿಣಾಮ ಇಬ್ಬರು ಪೈಲಟ್ಗಳು ಸೇರಿ ಐವರು ದುರ್ಮರಣ ಹೊಂದಿದ್ದಾರೆ. ಜನನಿಬಿಡ ಪ್ರದೇಶವಾದ ಘಾಟ್ಕೋಪಾರ್ನಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ವಿಮಾನ ಬಾರೀ ಸ್ಪೋಟದೊಂದಿಗೆ ಬಂದು ಅಪ್ಪಳಿಸಿದೆ. ಘಟನೆಯಿಂದ ವಿಮಾನದಲ್ಲಿದ್ದ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಇಂಜಿನಿಯರ್ ಸುರ್ಬಿ ಮತ್ತು ಟೆಕ್ನಿಷನ್ ಮನೀಶ್ ಪಾಂಡೆ ಹಾಗೂ ಓರ್ವ ಸ್ಧಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದಾರೆ ಎಂದು ನಾಗರಿಕ ವಿಮಾನಯಾನದ ನಿರ್ದೇಶಕ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತ್ಯಕ್ಷ ದರ್ಶಿವಿವರಿಸುವಂತೆ ಸುಮಾರು 1.30ರ ಸಮಯದಲ್ಲಿ ವಿಮಾನವೂ ಮಳೆಯ ಮಧ್ಯೆಯೇ ಲ್ಯಾಂಡ್ ಆಗುವಂತೆ ಧಾವಿಸುತ್ತ ಬಂದು ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿಗೆ ಅಲ್ಲದೆ ಎರಡು ಬಾರಿ ಜೋರಾದ ಸ್ಪೋಟದ ಶಬ್ದ ಕೇಳಿಸಿದೆ ಎಂದು ವಿವರಿಸಿದ್ದಾರೆ.
ಪರೀಕ್ಷಾರ್ಥವಾಗಿ ಹಾರಾಟ ನಡೆಸುತ್ತಿದ್ದ ವಿಮಾನ ಜುಹು ವಿಮಾನ ನಿಲ್ದಾಣದಿಂದ ಅಪಘಾತವಾಗುವ ಸ್ವಲ್ಪ ಮುಂಚಿತವಾಗಿ ಹೊರಟಿತ್ತು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.