ಮಂಗಳೂರು, ಜೂ29: ಅಪವಿತ್ರ ಮೈತ್ರಿ ಕಟ್ಟಿಕೊಂಡಿರುವ ರಾಜ್ಯ ಸರಕಾರದಲ್ಲಿ ಗುಂಪುಗಾರಿಕೆ ಎದ್ದುಕಾಣುತ್ತಿದ್ದು, ಇದಕ್ಕೆ ಪ್ರಕೃತಿ ಚಿಕಿತ್ಸೆಗೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿಯವರೇ ಸಾಕ್ಷಿಯಾಗಿದ್ದಾರೆ. ಸದ್ಯ ಆಯುಷ್ಯ ಮುಗಿದಿರುವ ಸರಕಾರ ಮೂರು ತಿಂಗಳಲ್ಲೇ ಪತನಗೊಂಡು ಬಿಜೆಪಿ ಆಡಳಿತ ಚುಕ್ಕಾಣಿ ನಡೆಸಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಪಕ್ ಫಾರ್ ಸಮರ್ಥನ್ ಕಾರ್ಯಕ್ರಮದಡಿ ಕ್ಷೇತ್ರದ ಕಾರ್ಯಕರ್ತರ, ಪ್ರಭಾವಿಗಳ ಮನೆಗಳಿಗೆ ಭೇಟಿ ನೀಡಿ ಬಳಿಕ ತೊಕ್ಕೊಟ್ಟು ಕಾಪಿಕಾಡು ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಾಕೃತಿಕ ವಿಕೋಪದಿಂದ ಜನತೆ ಬಹಳಷ್ಟು ತೊಂದರೆಗೆ ಒಳಗಾಗಿದ್ದರೂ, ಅದರ ಗೋಜಿಗೆ ಹೋಗದೆ ತಮ್ಮ ಪಕ್ಷದವರಿಗೆ ಸಿಗುವ ನಿಗಮವನ್ನು ಹಂಚಿಕೊಳ್ಳುವಲ್ಲಿ ಕುಮಾರಸ್ವಾಮಿ ಮತ್ತು ಪರಮೇಶ್ವರ್ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ನಿಗದಿತ ಸಮಯಕ್ಕಿಂತಲೂ ಮುಂದುವರಿದು ಮಂದಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುತ್ತಿಗೆ ವಹಿಸಿಕೊಂಡಿರುವ ಹೈದರಾಬಾದ್ ಮೂಲದ ನವಯುಗ ಕಂಪೆನಿಗೆ ರೂ. 1.5 ಕೋಟಿ ದಂಡ ವಿಧಿಸಲಾಗಿದೆ. ಜೂ.29 ರಂದು ನವಯುಗ ಸಂಸ್ಥೆಯ ಆಡಳಿತ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಮಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಪಿಪಿಪಿ ಯೋಜನೆಯಂತೆ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ, ಸರಕಾರಕ್ಕೂ ಕೆಲ ವರ್ಷಗಳ ಕಾಲ ಹೆಚ್ಚು ನಿಯಂತ್ರಣ ನಡೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.