ಮಂಗಳೂರು, ಜ. 12 (DaijiworldNews/MB) : ನೆರೆ ರಾಜ್ಯ ಕೇರಳದಲ್ಲಿ ಪಕ್ಷಿ ಜ್ವರ ಹರಡುತ್ತಿರುವ ಭೀತಿಯ ಮಧ್ಯೆ, ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಸೋಮವಾರ ಏಳು ಕಾಗೆಗಳು ಮೃತಪಟ್ಟಿವೆ.

ಪಚ್ಚನಾಡಿ ಡಂಪಿಂಗ್ ಯಾರ್ಡ್ ಬಳಿ ರಸ್ತೆಯಲ್ಲಿ ಮೂರು ಕಾಗೆಗಳು, ಶಕ್ತಿನಗರ ಹೌಸಿಂಗ್ ಕಾಲೋನಿ ಬಳಿ ಎರಡು ಮತ್ತು ಕುಪ್ಪೆಪದವು ಶಾಲಾ ರಸ್ತೆ ಬಳಿ ಇನ್ನೂ ಎರಡು ಕಾಗೆಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಆರೋಗ್ಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಇಲ್ಲಿನ ಮಂಜನಾಡಿಯಲ್ಲಿ ಆರು ಕಾಗೆಗಳು ಸತ್ತಿರುವುದು ಕಂಡುಬಂದಿದ್ದು ಮಾದರಿ ಪರೀಕ್ಷೆಯ ಬಳಿಕ ಮೃತ ಪಕ್ಷಿಗಳಿಗೆ ಪಕ್ಷಿ ಜ್ವರವಿರಲಿಲ್ಲ ಎಂದು ತಿಳಿದು ಬಂದಿದೆ
ಆರೋಗ್ಯ ಸಚಿವ ಕೆ.ಸುಧಾಕರ್ ಅವರು, ಕರ್ನಾಟಕದಲ್ಲಿ ಯಾವುದೇ ಪಕ್ಷಿ ಜ್ವರ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದ್ದರು. ಹಾಗೆಯೇ ಈವರೆಗೆ ಪರೀಕ್ಷಿಸಿದ ಎಲ್ಲಾ ಮಾದರಿಗಳು ನೆಗೆಟಿವ್ ಆಗಿದೆ ಎಂದು ತಿಳಿಸಿದ್ದರು.
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಪಕ್ಷಿ ಜ್ವರ ಹರಡಿದ ಹಿನ್ನೆಲೆಯಲ್ಲಿ ಜಾಗರೂಕರಾಗಿರಿ ಎಂದು ಅವರು ಗಡಿ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಕೇರಳದ ಗಡಿಯಲ್ಲಿರುವ ದಕ್ಷಿಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ.
"ನಾವು ಕೇರಳದ ಗಡಿಯಲ್ಲಿರುವ ನಾಲ್ಕು ಜಿಲ್ಲೆಗಳಾದ ಚಾಮರಾಜನಗರ, ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರುಗಳಲ್ಲಿ ಕಟ್ಟೆಚ್ಚರ ವಹಿಸಿದ್ದೇವೆ. ಪಕ್ಕದ ರಾಜ್ಯದಿಂದ ಪಕ್ಷಿ ಜ್ವರ ಹರಡದಂತೆ ತಡೆಯಲು ಕ್ರಮ ಕೈಗೊಂಡಿದ್ದೇವೆ. ಕರ್ನಾಟಕದಲ್ಲಿ ಈವರೆಗೆ ಯಾವುದೇ ಪಕ್ಷಿ ಜ್ವರದ ಪ್ರಕರಣಗಳು ವರದಿಯಾಗಿಲ್ಲ" ಎಂದು ರಾಜ್ಯ ಪಶುಸಂಗೋಪನಾ ವಿಭಾಗದ ಅಧಿಕಾರಿ ಜನವರಿ 7 ರಂದು ಮಾಧ್ಯಮಕ್ಕೆ ತಿಳಿಸಿದ್ದರು.
ಪಶುಸಂಗೋಪನಾ ಇಲಾಖೆಯು ಕೇರಳದಿಂದ ಬರುವ ವಾಹನಗಳನ್ನು ಮೇಲ್ವಿಚಾರಣೆ ಮಾಡಲು ಗಡಿ ಚೆಕ್-ಪೋಸ್ಟ್ಗಳಲ್ಲಿ ಪರಿಶೀಲನೆಗಾಗಿ ಅಗತ್ಯ ತಂತ್ರಜ್ಞಾನ ಅವಳಡಿಸಲಾಗಿದೆ. ಕೋಳಿ ಮತ್ತು ಮೊಟ್ಟೆಗಳನ್ನು ಪ್ರಮಾಣೀಕರಣವಿಲ್ಲದೆ ಜಿಲ್ಲೆಗಳಿಗೆ ಸಾಗಿಸಲು ಅನುಮತಿಸಲಾಗುತ್ತಿಲ್ಲ.
ಈವರೆಗೆ ದೇಶದ 10 ರಾಜ್ಯಗಳಲ್ಲಿ ಪಕ್ಷಿ ಜ್ವರ ದೃಢಪಟ್ಟಿದೆ ಎಂದು ಕೇಂದ್ರ ಪಶುಸಂಗೋಪನೆ, ಮೀನುಗಾರಿಕೆ ಸಚಿವಾಲಯ ಸೋಮವಾರ ತಿಳಿಸಿದೆ. ರಾಜಸ್ಥಾನ, ಗುಜರಾತ್, ಉತ್ತರಾಖಂಡ್, ದೆಹಲಿ, ಮಹಾರಾಷ್ಟ್ರ, ಕೇರಳ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಪಕ್ಷಿ ಜ್ವರ ದೃಢಪಟ್ಟಿದೆ.