ಮಂಗಳೂರು, ಜ. 12 (DaijiworldNews/MB) : ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯಲಿರುವ ದೇಣಿಗೆ ಸಂಗ್ರಹವು ಜನವರಿ 15 ರಿಂದ ಫೆಬ್ರವರಿ 5 ರವರೆಗೆ ನಡೆಯಲಿದ್ದು, ನಿಧಿ ಸಂಗ್ರಹಕ್ಕಾಗಿ ಕರಾವಳಿಯಲ್ಲಿ ಸಾವಿರಾರು ಕಾರ್ಯಕರ್ತರು ಸಿದ್ಧರಾಗಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ''ಮಕರ ಸಂಕ್ರಮಣ ಮರುದಿನದಿಂದ ಆರಂಭಗೊಂಡು 20 ದಿನಗಳ ಕಾಲ ಮಂಗಳೂರು ವಿಭಾಗದ ಕೊಡಗು, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಿಧಿ ಸಂಗ್ರಹ ನಡೆಯಲಿದೆ'' ಎಂದು ತಿಳಿಸಿದರು.
''ವಾರ್ಡ್ ಮಟ್ಟದಲ್ಲಿ 4 ಸಾವಿರಕ್ಕೂ ಮಿಕ್ಕ ಕಾರ್ಯಕರ್ತರು ಸಿದ್ಧರಾಗಿದ್ದು, ಪ್ರತೀ ಹಿಂದೂಗಳ ಮನೆ ಮನೆಗೆ ತೆರಳಿ ನಿಧಿ ಸಂಗ್ರಹಿಸಲಿದ್ದಾರೆ. ಮಂಗಳೂರು ವಿಭಾಗದಲ್ಲಿ 25 ಕೋಟಿ ರೂಪಾಯಿ ಸಂಗ್ರಹದ ಗುರಿ ಹೊಂದಿದ್ದೇವೆ. ನಿಧಿ ಸಂಗ್ರಹದ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲೂ ಕ್ರಮ ಕೈಗೊಂಡಿದ್ದೇವೆ'' ಎಂದೂ ತಿಳಿಸಿದರು.