ಮಂಗಳೂರು, ಜ.12 (DaijiworldNews/HR): ದೋಣಿಗಳು ನೀರಿನಲ್ಲಿ ಸಮಸ್ಯೆಗಳನ್ನು ಎದುರಿಸಿದಾಗ ಅವುಗಳನ್ನು ದಡಕ್ಕೆ ತಂದು ಸರಿಪಡಿಸಿ ಮತ್ತೆ ನೀರಿಗೆ ಕರೆದೊಯ್ಯಲಾಗುತ್ತದೆ. ಆದರೆ ಇದೀಗ ರಾಜ್ಯದಲ್ಲಿ ಮೊದಲ ಬಾರಿಗೆ ದೋಣಿ ಮಾಲೀಕರು ದೋಣಿಯಯನ್ನು ಸ್ಕೂಬಾ ಡೈವರ್ಗಳ ಮಾದರಿಯಲ್ಲಿ ನೀರಿನಲ್ಲಿಲೇ ಮುಳುಗಿಕೊಂಡು ದುರಸ್ತಿ ಮಾಡಿದ್ದಾರೆ. ಆ ಮೂಲಕ ಕರ್ನಾಟಕದ ಮೊದಲ ಅಂಡರ್ ವಾಟರ್ ಗ್ಯಾರೇಜ್ ಪ್ರಾರಂಭವಾಗಿದೆ.

ಸಾಂಧರ್ಭಿಕ ಚಿತ್ರ
ನಗರದ ನಿವಾಸಿ ಮತ್ತು ದೋಣಿಯ ಮಾಲೀಕರಾದ ರಾಜರತ್ನ ಸನಿಲ್ ಈ ಸಾಹಸವನ್ನು ಮಾಡಿದ ವ್ಯಕ್ತಿ. ಈಗ ಅಂಡರ್ ವಾಟರ್ ಗ್ಯಾರೇಜ್ ಜನವರಿ 9 ರಿಂದ ಅಧಿಕೃತವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಮೊದಲ ದಿನವೇ ರಾಜರತ್ನ ತಂಡವು ಏಳು ಗಂಟೆಗಳ ಕಾಲ ನೀರಿನಲ್ಲಿ ದುಡಿಯುವ ಮೂಲಕ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ದೋಣಿಯನ್ನು ಸರಿಪಡಿಸಿತು. ರಾಜರತ್ನ ಅವರೇ ದೋಣಿ ದುರಸ್ತಿ ಮಾಡುವ ತಾಂತ್ರಿಕ ಪರಿಣತಿಯನ್ನು ಹೊಂದಿದ್ದಾರೆ. ಅವರೊಂದಿಗೆ ಇನ್ನೂ ಇಬ್ಬರು ತಜ್ಞರಿದ್ದಾರೆ. ಈ ತಂಡಕ್ಕೆ ಕಳೆದ ವರ್ಷ ಮುಂಬೈನಲ್ಲಿ ತರಬೇತಿ ನೀಡಲಾಯಿತು.
ಸ್ಕೂಬಾ ಡೈವಿಂಗ್ ತಜ್ಞರ ತಂಡವು ಸ್ಕೂಬಾ ಡೈವಿಂಗ್ ಸೂಟ್ನೊಂದಿಗೆ ದೋಣಿಯ ಕೆಳಭಾಗವನ್ನು ತಲುಪುತ್ತದೆ. ಹೆಚ್ಚಾಗಿ ಪಾಚಿಗಳಿಂದಾಗಿ ದೋಣಿಯ ಕೆಳಭಾಗವು ಗಟ್ಟಿಯಾಗುತ್ತದೆ ಮತ್ತು ದೋಣಿ ನೀರಿನಲ್ಲಿ ಮುಕ್ತವಾಗಿ ಚಲಿಸದಂತೆ ತಡೆಯುತ್ತದೆ. ಇದರ ಜೊತೆಯಲ್ಲಿ, ಇತರ ತಾಂತ್ರಿಕ ಸಮಸ್ಯೆಗಳೂ ಸಹ ಇರುತ್ತದೆ. ತಂಡವು ಈ ಸಮಸ್ಯೆಗಳನ್ನು ಎರಡು ಮೂರು ಗಂಟೆಗಳಲ್ಲಿ ಪರಿಹರಿಸುತ್ತದೆ.