ಮಂಗಳೂರು, ಜೂ29: ಮಂಗಳೂರಿನಲ್ಲಿರುವ ಅಕ್ರಮ ಕಸಾಯಿಖಾನೆಗಳಿಗೆ ಮಹಾರಾಷ್ಟ್ರದಿಂದ ಅಕ್ರಮ ದನ ಮತ್ತು ಎತ್ತು ಸಾಗಾಟ ನಡೆಯುತ್ತಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಅಂಕೋಲಾ, ಕುಮಟಾದಲ್ಲಿ ನಡೆದ ಅಪಘಾತದ ಸಂದರ್ಭ ಈ ವಿಚಾರ ಬಯಲಿಗೆ ಬಂದಿದೆ. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ಹೆಬ್ಬುಳದ ಬಳಿ 11 ಎತ್ತುಗಳನ್ನು ತುಂಬಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಗೀರ್ ಜಾತಿಯ ದನಗಳು ಮೃತಪಟ್ಟಿತ್ತು. ಈ ಎತ್ತುಗಳನ್ನು ಗುಜರಾತ್, ಮಹಾರಾಷ್ಟ್ರದ ಲಾತೂರಿನಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು ಎಂಬುದು ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿದೆ. ಮಾತ್ರವಲ್ಲ, ಮಹಾರಾಷ್ಟ್ರದ ಎತ್ತು ಮತ್ತು ದನಗಳನ್ನು ಕರ್ನಾಟಕಕ್ಕೆ ಸಾಗಾಟ ಮಾಡಲು ತೆಲಂಗಾಣ ನೋಂದಣಿಯ ವಾಹನ ಬಳಕೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಬದುಕುಳಿದ ಎತ್ತುಗಳನ್ನು ಹೊನ್ನಾವರದ ಗೋ ಶಾಲೆಗೆ ರವಾನಿಸಲಾಗಿತ್ತು. 5 ಎತ್ತುಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಅನೇಕ ಎತ್ತುಗಳು ಗಾಯಗೊಂಡಿದ್ದವು. ಗಾಯಗೊಂಡ ಎತ್ತುಗಳಿಗೆ ಸ್ಥಳೀಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೊನ್ನಾವರದ ಗೋ ಶಾಲೆಗೆ ಕಳುಹಿಸಲಾಗಿದೆ.
ಇದೀಗ ಎತ್ತು, ದನ ಸಾಗಾಟಕ್ಕೆ ಸಂಬಂಧಿಸಿ ಕಳೆದ 3 ದಿನದಲ್ಲಿ ಒಟ್ಟು 3 ಪ್ರಕರಣ ಬೆಳಕಿಗೆ ಬಂದಿದೆ. ಅಂಕೋಲಾ, ಕುಮಟಾ ಪೊಲೀಸರು ಕಾರಿನಲ್ಲಿ ಕದ್ದೊಯ್ಯುತ್ತಿದ್ದ ಹಸುಗಳನ್ನು ಪತ್ತೆಹಚ್ಚಿದ್ದಾರೆ. ಮಂಗಳೂರಿನಲ್ಲಿರುವ ಅಕ್ರಮ ಕಸಾಯಿಖಾನೆಗಳಿಗೆ ಮಹಾರಾಷ್ಟ್ರದಿಂದ ಅಕ್ರಮ ದನ ಮತ್ತು ಎತ್ತು ಸಾಗಾಟ ನಡೆಯುತ್ತಿರುವ ಬಗ್ಗೆ ತನಿಖೆ ಮುಂದುವರೆದಿದೆ.