ಮಂಗಳೂರು, ಜೂ29: ನಗರದ ಪ್ರತಿಷ್ಠಿತ ಸಂತ ಆ್ಯಗ್ನೆಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಕ್ಯಾಂಪಸ್ ನಲ್ಲಿ ಸ್ಕಾರ್ಫ್ ಧರಿಸದಂತೆ ನಿಯಮ ಹಾಕಿದ್ದಾರೆ ಎಂದು ಆರೋಪಿಸಿ ಸಂಸ್ಥೆಯ ವಿರುದ್ಧ ಜೂ.25ರಂದು ಸಿಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆ ಸಂತ ಆ್ಯಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಜೆಸ್ವಿನಾ ಎ.ಸಿ ಪ್ರತಿಕ್ರಿಯಿಸಿದ್ದಾರೆ. ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಒಂದು ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆ. ಭಾರತದ ಪಶ್ಚಿಮ ಕರಾವಳಿಯ ಪ್ರಥಮ ಮಹಿಳಾ ಕಾಲೇಜು ಇದಾಗಿದೆ. ಧಾರ್ಮಿಕ ಶಿಕ್ಷಣ ಸಂಸ್ಥೆಯಾಗಿದ್ದರೂ, ಎಲ್ಲಾ ಜಾತಿ, ಮತದವರಿಗೆ ಶಿಕ್ಷಣ ಪಡೆಯಲು ಪ್ರವೇಶ ನೀಡುತ್ತಿದೆ. ಈ ಸಂಸ್ಥೆ ಆರಂಭದಿಂದಲೇ ಎಲ್ಲಾ ಮಹಿಳೆಯರಿಗೆ ಗುಣಮಟ್ಟದ, ಮೌಲ್ಯಯುತವಾದ ಶಿಕ್ಷಣ ನೀಡಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಬೇರೆ ಬೇರೆ ಉನ್ನತ ಹುದ್ದೆಗಳಲ್ಲಿ ಪ್ರತಿಷ್ಠಿತ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಸ್ಕಾರ್ಫ್ ವಿಚಾರವಾಗಿ ಸಂಸ್ಥೆಯ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಲೇಜು ಈಗ ಮಾಡಿರುವ ನಿಯಮಗಳು ಹಲವಾರು ವರ್ಷಗಳಿಂದಲೇ ಚಾಲ್ತಿಯಲ್ಲಿದೆ. ವಸ್ತ್ರ ಸಂಹಿತೆ ನಿಯಮಗಳ ಒಂದು ಭಾಗವಾಗಿದೆ. ಕಾಲೇಜಿನಲ್ಲಿ ಶಿಸ್ತು, ಸಮಾನತೆ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಕೆಲ ನಿಯಮಗಳನ್ನು ಪಾಲಿಸುತ್ತಾರೆ. ಆದರೆ ಕೆಲ ವಿದ್ಯಾರ್ಥಿಗಳು ನಿಯಮಗಳನ್ನು ಮೀರಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯ ನಂತರ ಕಾಲೇಜು ಮತ್ತು ಕಾಲೇಜಿನ ಸಿಬ್ಬಂದಿಗಳಿಗೆ ಸಂಬಂಧಿಸಿ ಅಪಪ್ರಚಾರ ಮತ್ತು ಸುಳ್ಳು ವದಂತಿ ಹಬ್ಬಿಸಿ ಕಾಲೇಜಿನ ಘನತೆಗೆ ಕುಂದು ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ಆರೋಪಿಸಿದಂತೆ ಕಾಲೇಜಿನ ಶಿಕ್ಷಕರು ಯಾವುದೇ ಸಂದರ್ಭದಲ್ಲಿ ಮಕ್ಕಳ ಸ್ಕಾರ್ಫ್ ಎಳೆದಿಲ್ಲ. ಮಾತ್ರವಲ್ಲ, ಅವರನ್ನು ಮುಟ್ಟಿಲ್ಲ. ಈ ಘಟನೆ ಬಳಿಕ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಿಲ್ಲ. ಮಾಧ್ಯಮದ ಮುಂದೆ ಮಾತನಾಡಿದ ವಿದ್ಯಾರ್ಥಿನಿ ಮರು ದಿನದಿಂದಲೇ ಕಾಲೇಜಿಗೆ ಬಂದಿದ್ದಾರೆ. ಕಾಲೇಜಿನ ನಿಯಮಗಳ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿನಿಯರಿಗೆ ಹೆತ್ತವರ ಸಮ್ಮುಖದಲ್ಲಿ ಲಿಖಿತ ಸ್ಪಷ್ಟಣೆ ನೀಡಲು ಸೂಚನೆ ನೀಡಲಾಗಿತ್ತು. ಇದನ್ನು ಹೊರತುಪಡಿಸಿ ಯಾವುದೇ ವಿದ್ಯಾರ್ಥಿನಿಯರ ಸಹಿ ಪಡೆದಿರುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
ಇದೇ ವೇಳೆ ವಿದ್ಯಾರ್ಥಿನಿ ಫಾತಿಮಾ ತಂದೆ ಆನಿಸ್ ಮಾತನಾಡಿ, ಸ್ಕಾರ್ಫ್ ವಿಚಾರವಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವುದು ಸರಿಯಲ್ಲ. ವಿದ್ಯಾರ್ಥಿಗಳು ಬಾಹ್ಯ ಸಂಘಟನೆಯ ಪ್ರಚೋದನೆಯಿಂದ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಇದ್ದುದರಿಂದ ಈ ಸಮಸ್ಯೆ ಉಂಟಾಗಿದೆ. ವಿದ್ಯಾರ್ಥಿಗಳು ಅರಿಯದೆ ಈ ತಪ್ಪು ಮಾಡಿದ್ದಾರೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.