ಉಳ್ಳಾಲ, ಜ 12 (DaijiworldNews/SM): ವೈಡ್ ಬಾಲ್ ರೈಟ್ ಎಂದು ಹೇಳಿದ ವಿಚಾರಕ್ಕೆ ಸಂಬಂಧಿಸಿ ಕೆ.ಸಿ. ರೋಡ್ ಮತ್ತು ಅಳೇಕಲದ ಎರಡು ತಂಡಗಳ ನಡುವೆ ಗಲಾಟೆ ಆರಂಭವಾಗಿ ಮಾರಾಮಾರಿ ನಡೆದು ಪೊಲೀಸರು ಲಾಠಿಯೇಟು ನೀಡಿದ ಘಟನೆ ಉಳ್ಳಾಲದ ಅಳೇಕಲ ಮದನಿ ಶಾಲೆಯಲ್ಲಿ ಶನಿವಾರ ನಡೆದಿದೆ.

ಇದೀಗ ವೀಡಿಯೋ ವೈರಲ್ ಆಗುವ ಮೂಲಕ ಘಟನೆ ಬೆಳಕಿಗೆ ಬಂದಿದೆ. ಉಳ್ಳಾಲ್ ಕ್ರಿಕೇಟ್ ಅಸೋಸಿಯೇಷನ್ ವತಿಯಿಂದ ಅಳೇಕಲದ ಮದನಿ ಶಾಲಾ ಮೈದಾನದಲ್ಲಿ ಅಂಡರ್ ಆರ್ಮ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಆಟದ ನಡುವೆ ವೈಡ್ ಬಾಲ್ ಕುರಿತು ವಿವಾದ ಏರ್ಪಟ್ಟಿತ್ತು. ಅದು ತಾರಕಕ್ಕೇರಿ ಹೊಯ್ಕೈ ನಡೆದಿತ್ತು. ಬಳಿಕ ಮಾರಾಮಾರಿ ನಡೆದಿದ್ದು, ಇದನ್ನು ಕಂಡ ಉಳ್ಳಾಲ ಪೊಲೀಸರು ಕ್ರೀಡಾಂಗಣಕ್ಕೆ ತೆರಳಿ ಮಾರಾಮಾರಿಯಲ್ಲಿ ಭಾಗವಹಿಸಿದ್ದ ಮಂದಿಗೆ ಲಾಠಿಯೇಟು ನೀಡಿ ಓಡಿಸಿದ್ದಾರೆ. ಘಟನೆ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ.