ಬೆಳ್ತಂಗಡಿ, ಜ. 13 (DaijiworldNews/MB) : ಜನವರಿ 11 ರ ಸೋಮವಾರ ರಾತ್ರಿ 11.30 ರ ಸುಮಾರಿಗೆ ತಾಲೂಕಿನ ಉಜಿರೆಯ ಜನಾರ್ದನ ದೇವಸ್ಥಾನದ ಬಳಿ ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದ ಸಂದರ್ಭ ಪೊಲೀಸರ ತಂಡದ ಮೇಲೆ ನಾಲ್ವರ ತಂಡ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ. ಸಿಬ್ಬಂದಿ ಧರಿಸಿದ್ದ ಸಮವಸ್ತ್ರವನ್ನೂ ಕಿಡಿಗೇಡಿಗಳು ಹರಿದು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಉಜಿರೆ ಮೂಲದ ಸಾಬು, ಮಂಜುನಾಥ್, ಕಿರಣ್ ಮತ್ತು ನವೀನ್ ಎಂದು ಗುರುತಿಸಲಾಗಿದೆ.
ಉಜಿರೆ ಗೇಟ್ ಬಳಿ ರಾತ್ರಿ ಬೀಟ್ನಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ವೆಂಕಟೇಶ್ ಮತ್ತು ಹೋಮ್ ಗಾರ್ಡ್ ರಾಜಣ್ಣ ಅವರು, ಸ್ಥಳದಲ್ಲಿದ್ದ ತಂಡಕ್ಕೆ ಅಲ್ಲಿಂದ ತೆರಳುವಂತೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಈ ಸಂದರ್ಭ ಆರೋಪಿಗಳು ದಾಂಧಲೆ ನಡೆಸಿದ್ದು ಪೊಲೀಸ್ ಸಿಬ್ಬಂದಿಗಳ ಕಾಲರ್ ಹಿಡಿದು ಎಳೆದು, ಬಟ್ಟೆ ಹರಿದು, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬೀಟ್ ಪೊಲೀಸರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.