ನವದೆಹಲಿ, ಜೂ30: ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ವಲಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೀತಿ ಆಯೋಗ ಅದ್ಯಯನವೊಂದನ್ನು ನಡೆಸಿದ್ದು, ಈ ಅಧ್ಯಯನದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಅಚ್ಚೇ ದಿನ್ ಇಲ್ಲ ಎಂದು ತಿಳಿದುಬಂದಿದೆ.
ಅಚ್ಚೇ ದಿನ್ ಕಲ್ಪನೆ, ಘೋಷಣೆಗಳ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ್ದ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟಕ್ಕೆ ನೀತಿ ಆಯೋಗ ನೀಡಿರುವ ಈ ವರದಿ ಶಾಕ್ ನೀಡಿದೆ. ಬಿಜೆಪಿ ಸರ್ಕಾರ ರಚನೆ ಮಾಡಿರುವ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ನ್ಯಾಯದಲ್ಲಿ ಹಿಂದಿದೆ ಎಂದು ನೀತಿ ಆಯೋಗ ತಜ್ಞರ ತಂಡ ಹೇಳಿದೆ.
ಔದ್ಯೋಗಿಕ ಮತ್ತು ಕೈಗಾರಿಕಾ ವಲಯದಲ್ಲಿ ಗುಜರಾತ್ ದಾಹೋದ್ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಅಂತೆಯೇ ಟಿ.ಆರ್.ಎಸ್ ಸರ್ಕಾರವಿರುವ ತೆಲಂಗಾಣ, ತೆಲುಗು ದೇಶಂ ಪಕ್ಷದ ಆಡಳಿತ ಇರುವ ಆಂಧ್ರ ಪ್ರದೇಶ, ಎಐಎಡಿಎಂಕೆ ಆಡಳಿತವಿರುವ ತಮಿಳುನಾಡು ರಾಜ್ಯಗಳು ಕೈಗಾರಿಕಾ ವಲಯದಲ್ಲಿ ಉತ್ತಮ ಅಭಿವೃದ್ಧಿ ಸಾಧಿಸುತ್ತಿವೆ ಎಂದು ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ.
ನೀತಿ ಆಯೋಗ ಪಟ್ಟಿ ಮಾಡಿರುವ ಒಂಭತ್ತು ಅತ್ಯಂತ ಕಡಿಮೆ ಅಭಿವೃದ್ಧಿ ಸಾಧಿಸಿರುವ ಜಿಲ್ಲೆಗಳಲ್ಲಿ ಬಿಜೆಪಿ ಆಡಳಿತ ವಿರುವ ಬಿಹಾರ. ಉತ್ತರ ಪ್ರದೇಶ. ಜಾರ್ಖಂಡ್ ಮತ್ತು ಛತ್ತೀಸ್ ಘಡ ರಾಜ್ಯಗಳ ಜಿಲ್ಲೆಗಳಿವೆ. ಈ ಪೈಕಿ ಬಿಹಾರದ ಬೇಗುಸರೈ, ಬಂಕಾ, ಖಗಾರಿಯಾ ಜಿಲ್ಲೆಗಳನ್ನು ಅತ್ಯಂತ ಕೆಟ್ಟ ಅಭಿವೃದ್ಧಿ ಜಿಲ್ಲೆಗಳು ಎಂದು ಗುರುತಿಸಲಾಗಿದೆ. ಬಿಹಾರದಲ್ಲಿ 13 ವರ್ಷಗಳ ಕಾಲ ಜೆಡಿಯು ಪಕ್ಷದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ ಪಾಲುದಾರ ಪಕ್ಷವಾಗಿದೆ.
ಜಾರ್ಖಂಡ್ ನ ಸಿಮ್ ದೆಗಾ, ರಾಂಚಿ ಕೂಡ ಪಟ್ಟಿಯ ಕಟ್ಟಕಡೆಯ ಸ್ಥಾನದಲ್ಲಿವೆ. ಅಂತೆಯೇ ಛತ್ತೀಸ್ ಘಡದಲ್ಲಿ ಬಿಜೆಪಿ 14 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಛತ್ತೀಸ್ ಘಡದ ನಕ್ಲಸ್ ಪೀಡಿತ ಪ್ರದೇಶಗಳಾದ ಸುಕ್ಮಾ, ಕಳಪೆ ಅಭಿವೃದ್ಧಿಯ ಟಾಪ್ 10 ಜಿಲ್ಲೆಗಳ ಪಟ್ಟಿಯಲ್ಲಿದೆ. ಇಲ್ಲಿನ ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿನ ಕೊರತೆಗಳನ್ನು ನೀಗಿಸಲು ಕೈಗೊಂಡ ಕ್ರಮಗಳು ಸಮಾಧಾನಕರವಾಗಿಲ್ಲ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.