ಉಡುಪಿ, ಜ.15 (DaijiworldNews/PY): ಪರ್ಯಾಯ ಅದಮಾರು ಮಠದ ಪಂಚಶತಮಾನೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾರ್ಯಕ್ರಮವು ಜ.16ರಿಂದ ಜ.23ರವರೆಗೆ ನಡೆಯಲಿದ್ದು, ಜ.18ರ ಸೋಮವಾರದಂದು ಭಕ್ತರಿಗೆ ಶ್ರೀಕೃಷ್ಣನ ದರ್ಶನಕ್ಕೆ ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾದ ಮಾರ್ಗವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದು ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.













ಜ.14ರ ಗುರುವಾರದಂದು ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶ್ರೀಕೃಷ್ಣನ ದರ್ಶನ ಪಡೆಯಲು ನೂತನವಾಗಿ ವಿಶ್ವಪಥವನ್ನು ನಿರ್ಮಿಸಲಾಗಿದೆ. ಮೊದಲು ದೇವಾಲಯದ ಪ್ರವೇಶ ದ್ವಾರದಲ್ಲಿ ಮರದ ರಥವಿದ್ದು, ನಂತರ ಮಧ್ವ ಸರೋವರ ಕಾಣಿಸುತ್ತದೆ. ಬಳಿಕ ಸ್ವರ್ಣ ಗೋಪುರವಿದ್ದು, ಅಂತಿಮವಾಗಿ ಭಕ್ತರು ಪ್ರಸಾದ ಪಡೆದು ದೇವಾಲಯದಿಂದ ನಿರ್ಗಮಿಸಬಹುದಾಗಿದೆ. ಈ ಹೊಸ ವ್ಯವಸ್ಥೆಯು ಅದಮಾರು ಸ್ವಾಮೀಜಿ ಅವರ ಯೋಜನೆಗಳ ಪ್ರಕಾರ ರೂಪಿಸಲಾಗಿದೆ" ಎಂದರು.
"ಆಚಾರ್ಯ ಮಧ್ವರ ಕಾಲದಲ್ಲಿ ಎರಡು ತಿಂಗಳ ಪರ್ಯಾಯ ವ್ಯವಸ್ಥೆ ನಡೆಸಲಾಗುತ್ತಿತ್ತು. 1522ರಲ್ಲಿ ಮೊದಲ ಬಾರಿಗೆ ಎರಡು ವರ್ಷಗಳ ಪರ್ಯಾಯ ವ್ಯವಸ್ಥೆ ಆರಂಭವಾಯಿತು" ಎಂದು ಹೇಳಿದ್ದಾರೆ.
ಜ.18ರಂದು ಜೋಡುಕಟ್ಟೆಯಿಂದ ಮೇನೆಯಲ್ಲಿ ಶ್ರೀಮನ್ಮಧ್ವಾಚಾರ್ಯ ಹಾಗೂ ಶ್ರೀವಾದಿರಾಜ ಶ್ರೀಪಾದರ ಕೃತಿಗಳೊಂದಿಗೆ ರಥಬೀದಿಯವರೆಗೆ ಮೆರವಣಿಗೆ ನಡೆಯಲಿದೆ. ಜ.22ರಂದು ತುಳುಗೋಷ್ಠಿ ಹಾಗೂ ತುಳು ಕಲಿಕೆಯ ಉದ್ಘಾಟನೆ ನಡೆಯಲಿದೆ. ಜ.23ರಂದು ಪಂಚಶತಮಾನೋತ್ಸವ ಸಂಭ್ರಮಾಚರಣೆ ನಡೆಯಲಿದೆ.
ಗ್ರಾಮೀಣ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ, ಎಂಟು ದಿನಗಳ ಕಾಲ ರಾಷ್ಟ್ರಮಟ್ಟದ ಗ್ರಾಮೀಣ ಉತ್ಪನ್ನಗಳ ಮೇಳ, ಪ್ರದರ್ಶನ ಹಾಗೂ ಮಾರಾಟವನ್ನು ಸಹ ಆಯೋಜಿಸಲಾಗಿದೆ. ಬಿಹಾರದ ಮಧುಬಾನಿ ಕಲೆ, ಮಿಥಿಲಾ ಕಲೆ, ಮಂಜುಷ ಚಿತ್ರಕಲೆ, ಮಣ್ಣಿನ ಮಾದರಿಗಳು, ಮರದ ಶಿಲ್ಪಗಳು ಹಾಗೂ ಅನೇಕ ಕಲೆಗಳ ಪ್ರದರ್ಶನ ನಡೆಯಲಿದೆ.
ಮಠದ ದಿವಾನ್ ಲಕ್ಷ್ಮೀನಾರಾಯಣ ಮುಚ್ಚಿಂತಾಯ, ಸಂತೋಷ್ ಕುಮಾರ್ ಉದ್ಯಾವರ, ಪುರುಷೋತ್ತಮ ಅಡ್ವೆ, ವೈ.ಎನ್. ರಾಮಚಂದ್ರ ರಾವ್, ರೋಹಿತ್ ತಂತ್ರಿ, ಪರಶುರಾಮ್ ಭಟ್, ಮಾಧವ ಆಚಾರ್ಯ, ಪ್ರದೀಪ್ ರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.