ಉಡುಪಿ, ಜ.15 (DaijiworldNews/PY): ಮಕರ ಸಂಕ್ರಾಂತಿಯ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಜ.14ರ ಗುರುವಾರ ಸಂಜೆ ಧಾರ್ಮಿಕ ವೈಭವದಿಂದ ಆರು ಮಠಾಧೀಶರ ಉಪಸ್ಥಿತಿಯಲ್ಲಿ ತ್ರಿವಳಿ ರಥೋತ್ಸವ ನೆರವೇರಿತು.


















ಮಾಧ್ವ ಸಂಪ್ರದಾಯಂದಂತೆ ಸಪ್ತೋತ್ಸವದ ಆರನೇ ದಿನ ರಾತ್ರಿ ಬ್ರಹ್ಮ ರಥೋತ್ಸವ ಸೇರಿದಂತೆ ಗರುಡ ರಥ ಮತ್ತು ಮಹಾಪೂಜೆ ರಥವನ್ನು ಅಷ್ಟ ಮಠಾಧೀಶರ ಉಪಸ್ಥಿತಿಯಲ್ಲಿ ಎಳೆಯವುದು ವಾಡಿಕೆ. ಅದೇ ರೀತಿ, ಕೊರೊನಾದಂತ ಪರಿಸ್ಥಿತಿಯಲ್ಲೂ ಯಾವುದೇ ವಿಘ್ನವಿಲ್ಲದೆ ನೆರವೇರಿತು. ಸಾವಿರಾರು ಮಂದಿ ಭಕ್ತರು ಈ ಸುಂದರ ದೃಶ್ಯವನ್ನು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.
ಈ ವೇಳೆ ಒಡಿಸ್ಸಾದ ಶಂಖನಾದ, ರಾಮನಗರದ ನಗರಿ ವಿಶೇಷ ಆಕರ್ಷಣೆ ಆಗಿತ್ತು.
ಮಕರ ಸಂಕ್ರಮಣದ ಪರ್ವ ಕಾಲದಲ್ಲಿ ಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ ದೇವರ ಉತ್ಸವ ಮೂರ್ತಿಯನ್ನು ಮಂತ್ರ ವೇದ ಘೋಷಗಳೊಂದಿಗೆ ಮಧ್ವ ಸರೋವರದಲ್ಲಿ ಒಂದು ಸುತ್ತು ಹಾಕುವ ಮೂಲಕ ತೆಪ್ಪೋತ್ಸವ ನಡೆಯಿತು.
ತದನಂತರ ಕೃಷ್ಣ ಮಠದ ದ್ವಾರದಲ್ಲಿ ಕ್ರಮವಾಗಿ ಶ್ರೀ ಕೃಷ್ಣ ಮೂರ್ತಿಯನ್ನು ಬ್ರಹ್ಮರಥದಲ್ಲಿ, ಗರುಡರಥದಲ್ಲಿ ಮುಖ್ಯ ಪ್ರಾಣದೇವರ ಮೂರ್ತಿಯನ್ನು, ಮಹಾಪೂಜೆ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರನ್ನು ಕುಳ್ಳಿರಿಸಿ ಪೂಜೆ ಮಾಡಿ ರಥಗಳ ಮುಂದೆ ಅಷ್ಟ ಮಠಾಧೀಶರು ಮುಂದೆ ಸಾಗುತ್ತಲೇ ರಥಬೀದಿ ಸುತ್ತ ಒಂದು ಸುತ್ತು ಎಳೆಯಲಾಯಿತು.
ವಾಡಿಕೆಯ ಪ್ರಕಾರ ಮೂರು ಮೂರ್ತಿಯನ್ನು ರಥದಲ್ಲಿ ಇಟ್ಟ ನಂತರ ಗರುಡ ರಥವನ್ನು ಮೂರು ಸುತ್ತು ಸುತ್ತುತ್ತಾನೆ. ಅದಾದ ನಂತರವೇ ರಥ ಎಳೆಯಲು ಚಾಲನೆ ನೀಡಲಾಗುತ್ತದೆ ಎಂಬುದು ನಂಬಿಕೆ. ವೈಭವದ ಉತ್ಸವದ ನಂತರ ಪರ್ಯಾಯ ಸ್ವಾಮಿಗಳು ಭಕ್ತಾದಿಗಳಿಗೆ ಮಂತ್ರಾಕ್ಷತೆಯನ್ನು ನೀಡುತ್ತಾರೆ.
ಉತ್ಸವದಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀ ವಿಶ್ವ ವಲ್ಲಭ ತೀರ್ಥರು ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರ ತೀರ್ಥರು ಪಾಲ್ಗೊಂಡಿದ್ದರು.