ಮಂಗಳೂರು, ಜು 01: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮಾಜಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಮತ್ತು ಇತರ ಮಹಿಳಾ ಸಿಬ್ಬಂದಿ ಭಾಗಿಯಾಗಿದ್ದಾರೆ ಎನ್ನಲಾದ 11,42,280 ರೂ ಮೊತ್ತದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿಕೊಂಡಿದೆ.
ಈ ಹಿಂದೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದ ಡಾ| ಸರೋಜಾ ಮತ್ತು ಪ್ರಥಮ ದರ್ಜೆ ಸಹಾಯಕರಾದ ಬಿ.ಜಿ ಯಶೋದಾ ಮತ್ತು ಕೆ.ಬಿ. ಸುಮ ಇವರು 2011-12 ಮತ್ತು 2012-13 ನೇ ಸಾಲಿನಲ್ಲಿ ಸರ್ಜಿಕಲ್ ಗ್ಲೌಸ್ ಗಳ ಖರೀದಿಯಲ್ಲಿ ರೂ.10,86,780 ಮತ್ತು ಲಿನನ್ ಬಟ್ಟೆ ಖರೀದಿಯಲ್ಲಿ ರೂ.45,500 ಹಾಗೂ ಬೆಡ್ಡಿಂಗ್ ಸಾಮಾಗ್ರಿ ಖರೀದಿಯಲ್ಲಿ ರೂ.10,000/- ಹೀಗೆ ಒಟ್ಟು 11,42,280 ರೂಗಳಿಗಿಂತ ಮೇಲ್ಪಟ್ಟ ಅವ್ಯವಹಾರ ನಡೆಸಿರುತ್ತಾರೆ ಎಂಬ ದೂರಿನನ್ವಯ, ಡಾ|ಸರೋಜಾ ಮತ್ತು ಪ್ರಥಮ ದರ್ಜೆ ಸಹಾಯಕರಾದ ಬಿ.ಜಿ ಯಶೋದಾ ಮತ್ತು ಕೆ.ಬಿ. ಸುಮ ಇವರುಗಳ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 ರಡಿಯಲ್ಲಿ ಪ್ರಕರಣ ದಾಖಲಾಗಿದೆ.
ಎಸಿಬಿ ಪೊಲೀಸ್ ಅಧೀಕ್ಷಕಿ ಶ್ರುತಿ.ಎನ್.ಎಸ್ ಇವರ ಮಾರ್ಗದರ್ಶನದೊಂದಿಗೆ, ಪೊಲೀಸ್ ಉಪಾಧೀಕ್ಷಕ ಸುಧೀರ್.ಎಂ ಹೆಗಡೆ ಇವರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪ್ರಕಟನೆ ತಿಳಿಸಿದ್ದಾರೆ. ಡಾ ಸರೋಜಾ ಈಗ ನಿವೃತ್ತರಾಗಿದ್ದು, ಯಶೋದಾ ಮತ್ತು ಸುಮಾ ಅವರು ಈಗಲೂ ಕರ್ತವ್ಯದಲ್ಲಿದ್ದಾರೆ.