ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು. 5 ರಿಂದ ಸಂಜೆಯ ವೇಳೆಯೂ ಆಶ್ಲೇಷಾ ಬಲಿ ಆರಂಭಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ. ಆಶ್ಲೇಷಾ ಬಲಿ ಸೇವೆ ಬೆಳಗ್ಗಿನ ಸಮಯದಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಕ್ಕೆ ಹರಕೆ ಸೇವೆಗಳನ್ನು ಪೂರೈಸಲು ಬರುವ ಭಕ್ತರ ಪ್ರಮಾಣ ಅಧಿಕವಾಗಿದೆ. ಪ್ರತಿನಿತ್ಯ ಸುಮಾರು 400-500 ಮಂದಿ ಆಶ್ಲೇಷಾ ಬಲಿ ಸೇವೆ ಸಲ್ಲಿಸುತ್ತಾರೆ. ವಿಶೇಷ ದಿನ ಹಾಗೂ ಸಾರ್ವಜನಿಕ ರಜಾ ದಿನಗಳಲ್ಲಿ ಇದರ ಪ್ರಮಾಣ 1,200ರಿಂದ 1,400ರ ತನಕವೂ ಏರಿಕೆಯಾಗುತ್ತಿದೆ. ಈ ಕಾರಣದಿಂದ ಭಕ್ತರ ಅನುಕೂಲಕ್ಕಾಗಿ ಸಂಜೆಯೂ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.
ಸಂಜೆ ಆಶ್ಲೇಷಾ ಬಲಿ ಸೇವೆ ಆರಂಭಿಸುವ ಮೊದಲು ಅಷ್ಟ ಮಂಗಲ ಚಿಂತನೆಯನ್ನು ಇಡಲಾಗಿದ್ದು, ಪ್ರಶ್ನೆಯಲ್ಲಿ ಕಂಡು ಬಂದ ಕೆಲ ಪ್ರಾಯಶ್ಚಿತ್ತಾದಿಗಳನ್ನು ನೆರವೇರಿಸಲಾಗಿದೆ. ಜು. 4ರಂದು ದೇವರಿಗೆ ದ್ರವ್ಯಕಲಶಾಭಿಷೇಕ ನೆರವೇರಿಸಿ ಸಂಜೆ ದೇಗುಲದ ವತಿಯಿಂದ ಆಶ್ಲೇಷಾ ಬಲಿ ಸೇವೆ ನಡೆಸಲಾಗುವುದು. ಮರುದಿನದಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು. ಬೆಳಗ್ಗೆ ನಡೆಯುವ ಆಶ್ಲೇಷಾ ಬಲಿ ಸೇವೆ ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.ಮಧ್ಯಾಹ್ನ 12.30ರಿಂದ 4.30ರ ತನಕ ಆಯಾ ದಿನದ ಸೇವಾ ರಶೀದಿ ನೀಡಲಾಗುತ್ತದೆ. 5 ಗಂಟೆಗೆ ಸೇವೆ ಆರಂಭಗೊಳ್ಳುತ್ತದೆ. ಸೇವಾ ಶುಲ್ಕದಲ್ಲಾಗಲೀ ವಿಧಿ ವಿಧಾನಗಳಲ್ಲಾಗಲೀ ಯಾವುದೇ ಬದಲಾವಣೆ ಇರುವುದಿಲ್ಲ. ಸಂಜೆ ಒಂದು ಪಾಳಿಯಲ್ಲಿ ಮಾತ್ರ ಆಶ್ಲೇಷಾ ಬಲಿ ಸೇವೆ ನೆರವೇರಿಸಲಾಗುತ್ತದೆ. ಇದರಿಂದಾಗಿ ಭಕ್ತರಿಗೆ ಹೆಚ್ಚಿನ ಅನುಕೂಲತೆ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
ಪ್ರತಿ ತಿಂಗಳ ಶುದ್ಧ ಷಷ್ಠಿ, ಏಕಾದಶಿ ಇತ್ಯಾದಿ ಉಪವಾಸ ದಿನಗಳು ಮತ್ತು ವಾರ್ಷಿಕ ಜಾತ್ರೆ ಸಮಯದ ಕೊಪ್ಪರಿಗೆ ಏರಿದ ದಿನದಿಂದ ಮಹಾಸಂಪ್ರೋಕ್ಷಣೆ ವರೆಗಿನ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಈ ಸೇವೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.