ಉಡುಪಿ, ಜ. 15 (DaijiworldNews/MB) : ಪಡುಕೆರೆ ಬೀಚನ್ನು ಮರೀನಾ ಬೀಚಾಗಿ ಮಾಡುವ ಪ್ರಸ್ತಾವನೆಯನ್ನು ವಿರೋಧಿಸಿ ಸರ್ವ ಸಂಘಗಳ ಒಕ್ಕೂಟದಿಂದ ಶುಕ್ರವಾರ, ಜನವರಿ 15 ರಂದು ಶ್ರೀ ಬಾಲಾಂಜನೇಯ ಮಂದಿರದ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು.











ಮಲ್ಪೆ ಮೀನುಗಾರರ ಸಂಘದ ಅದ್ಯಕ್ಷ ರಾದ ಕೃಷ್ಣ ಸುವರ್ಣ ಮಾತನಾಡಿ, "ಪಡುಕೆರೆ ಬೀಚನ್ನು ಮರೀನಾ ಮಾಡುವ ಪ್ರಸ್ತಾವನೆಯನ್ನು ಕೈಬಿಡುವುದು ಒಳ್ಳೆಯದು. ಜನವರಿ 18 ರಂದು ಉಡುಪಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಆಗಮಿಸುವ ಸಂದರ್ಭದಲ್ಲಿ ಮೀನುಗಾರ ಮುಖಂಡರು ಅವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ. ಪರಕೀಯವಾದ, ಮೀನುಗಾರಿಕೆಗೆ ತೊಂದರೆಯನ್ನುಂಟು ಮಾಡುವ ಕೆಲಸವನ್ನು ನಾವು ವಿರೋಧಿಸುತ್ತೇವೆ" ಎಂದರು.
ಹಿರಿಯ ಮೀನುಗಾರ ಮುಖಂಡರಾದ ರಾಮ ಕಾಂಚನ್, "ಶಾಂತಿನಗರದಿಂದ ಮಟ್ಟು ಕೂಪ್ಲುವರೆಗೆ ಇದು ಆವರಿಸುತ್ತದೆ. ಪಡುಕೆರೆ ಅಭಿವೃದ್ಧಿ ಆಗಬೇಕೆ ಹೊರತು ಕೆಡುಕಲ್ಲ. ಅಂತಹ ಯೋಜನೆಯನ್ನು ಪ್ರೋತ್ಸಾಹ ಮಾಡುವುದಿಲ್ಲ. ನಮ್ಮ ಪೂರ್ವಜರು ಹುಟ್ಟಿ ಬೆಳೆದ ಪ್ರದೇಶವನ್ನು ತೊರೆಯುವ ಪರಿಸ್ಥಿತಿ ಬರಬಹುದು" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಡದೋಣಿ ಸಂಘದ ಅಧ್ಯಕ್ಷರಾದ ಜನಾರ್ದನ್ ತಿಂಗಳಾಯವರು, "ಇದು ಅಭಿವೃದ್ಧಿ ಹೆಸರಲ್ಲಿ ಜನರಿಗೆ ಮೋಸ ಮಾಡುವ ವ್ಯವಸ್ಥೆ. ಪಡುಕೆರೆ ಮರಿನಾ ಆದರೆ ಇಲ್ಲಿನ ಸ್ಥಳೀಯ ರನ್ನು ಎತ್ತಂಗಡಿ ಮಾಡುವ ಆತಂಕವಿದೆ. ಇಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಮೀನುಗಾರಿಕೆ ಮಾಡುವ ಆಶಯ ಇದೆ. 40 ವರ್ಷ ಕೈರಂಪಣಿ ಲಯಲ್ಲಿ ದುಡಿದಿದ್ದೇನೆ. ಈ ಜಾಗದ ಋಣ ನನ್ನ ಮೇಲಿದೆ. ಇಲ್ಲಿ ಮರೀನಾ ಬೀಚ್ ಬೇಡವೇ ಬೇಡ. ಈ ಯೋಜನೆಯ ವಿರೋಧಿಸಿ ನನ್ನ ಪ್ರಾಣ ತ್ಯಜಿಸಲು ಸಿದ್ದನಿದ್ದೇನೆ" ಎಂದರು.
ಸಂವೇದನಾ ಟ್ರಸ್ಟ್ ನ ಪ್ರಕಾಶ್ ಮಲ್ಪೆಯವರು ಈ ಸಂದರ್ಭದಲ್ಲಿ ಮಾತನಾಡಿ, "ಜಿಲ್ಲಾಧಿಕಾರಿ ಮತ್ತು ಶಾಸಕರು ಮರೀನಾ ಬೀಚ್ ಮಾಡುವ ಬಗ್ಗೆ ಪ್ರಸ್ತಾಪವೆತ್ತಿದ್ದಾರೆ. ಇದರಲ್ಲಿ ಸಾಧಕಕ್ಕಿಂತ ಭಾದಕವೆ ಹೆಚ್ಚು. ಇದು ಇಡೀ ಊರಿನ ಸೌಂದರ್ಯ ಗೆಡಿಸಿತ್ತದೆ. ಇಡೀ ಏಷ್ಯಾದಲ್ಲಿ ಸರ್ವ ಋತು ಬಂದರು ಆಗಿರುವ ಮಲ್ಪೆ ಪಡುಕೆರೆ ಈಗ ಸಮಸ್ಯೆ ಉಂಟಾಗುತ್ತದೆ. ಮೀನುಗಾರಿಕೆಗೆ ಇದು ದೊಡ್ಡ ಹೊಡೆತ. ಅಲ್ಲದೆ ದ್ವೀಪಗಳೆ ಪೂರ್ವಜರಿಂದ ಪೂಜಿಸಲ್ಪಟ್ಟು ಬಂದಿರುವ ಆರಾದ್ಯ ದೈವಗಳಿಗೆ ಅಪಚಾರವಾಗುತ್ತದೆ. ಕೊಚ್ಛಿಯಲ್ಲಿರುವ ಮರೀನಾದಲ್ಲಿ 34 ಯಾಚ್ ಗಳನ್ನು ಇಡುವ ವ್ಯವಸ್ಥೆ ಇದೆ. ಇಲ್ಲಿ ಶಾಂತಿನಗರದಿಂದ - ನಾರಾಯಣ ಮಂದಿರದವರೆಗೆ ಸುಮಾರು 5 ಕಿಮೀ ಉದ್ದ ಮರೀನಾ ಬರಬಹುದು. ಅಂದರೆ ಪಡುಕೆರೆಯ ಮುಕ್ಕಾಲು ಭಾಗ ಮರೀನಾ ದ ಪಾಲಾಗುತ್ತದೆ. ಅಷ್ಟೇ ಅಲ್ಲದೆ ಜನವಸತಿ ಧಾರ್ಮಿಕ ನಂಬಿಕೆಗೆ ಹೊಡೆತ ಬೀಳುತ್ತದೆ. ಊರು ಸಿಂಗಾಪುರವಾದರೂ ಅದು ಪರಕೀಯ ವಾಗಿ ಬದಲಾಗುತ್ತದೆ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಲಾಂಜನೇಯ ಮಂದಿರದ ದೇವದಾಸ್ ಕೋಟ್ಯಾನ್, ಸುಮಿತ್ರ ಕುಂದರ್, ಮೊದಲಾದ ವರು ಉಪಸ್ಥಿತರಿದ್ದರು.