ಮಂಗಳೂರು, ಜ. 16 (DaijiworldNews/MB) : ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಜನವರಿ 14 ರಂದು ಪದವಿನಂಗಡಿ ಬಳಿಯ ಕೊಂಚಾಡಿಯಲ್ಲಿರುವ ದೇವಸ್ಥಾನ ಸಮೀಪ ಬಾಲಕನನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಯುಟ್ಯೂಬ್ಗೆ ವಿಡಿಯೋ ಅಪ್ಲೋಡ್ ಮಾಡಲು ಅಪಹರಣದ ನಾಟಕವಾಡಿರುವುದಾಗಿ ಆರೋಪಿಗಳು ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಮೂವರು ಆರೋಪಿಗಳು ಕಾವೂರು ಮತ್ತು ಬೊಂದೇಲ್ ನಿವಾಸಿಗಳಾಗಿದ್ದು, ಈ ಪೈಕಿ ಓರ್ವ ಆರೋಪಿ ಕಾಲೇಜು ವಿದ್ಯಾರ್ಥಿ ಎಂದು ಹೇಳಲಾಗಿದೆ.
ಬುಧವಾರ ಸಂಜೆ 7 ಗಂಟೆ ಸುಮಾರಿಗೆ 7 ರಿಂದ 11 ವರ್ಷದೊಳಗಿನ ಮೂವರು ಬಾಲಕರು ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬಾಲಕರ ಬಳಿ ನಿಲ್ಲಿಸಿ, ಓರ್ವನ ಮೇಲೆ ಗೋಣಿ ಚೀಲದ ಮುಸುಕು ಹಾಕಿ ಹಿಡಿಯಲು ಯತ್ನಿಸಿದ್ದಾರೆ. ಜತೆಗಿದ್ದ ಬಾಲಕ ಕಲ್ಲು, ಮಣ್ಣಿ ಎಸೆದು ದಾಳಿ ನಡೆಸಿ, ಬೊಬ್ಬೆ ಹಾಕಿ ಪರಿಸರದವರನ್ನು ಕರೆದಿದ್ದು ದುಷ್ಕರ್ಮಿಗಳು ಸಿಕ್ಕಿ ಬೀಳುವ ಅಪಾಯದಿಂದ ಕೂಡಲೇ ಅಲ್ಲಿಂದ ಪರಾರಿಯಾದರು.
ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಉಪ ಆಯುಕ್ತ ಹರಿರಾಂ ಶಂಕರ್, ಕಂಕನಾಡಿ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬಾಲಕರಿಂದ ಘಟನೆಯ ವಿವರಗಳನ್ನು ಸಂಗ್ರಹಿಸಿ ಸಿಸಿಟಿವಿ ದೃಶ್ಯಾವಳಿಗಳಿಂದಲೂ ಮಾಹಿತಿಯನ್ನು ಪಡೆದುಕೊಂಡಿದ್ದರು.
ಇದೀಗ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಮಕ್ಕಳನ್ನು ಯಾಮಾರಿಸುವ ನಾಟಕವಾಡಿ ಅದನ್ನು ಮೊಬೈಲ್ನಲ್ಲಿ ವೀಡಿಯೋ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲೆಂದು ಈ ನಾಟಕವಾಡಿದ್ದರು ಎಂದು ಹೇಳಿರುವುದಾಗಿ ಮಾಹಿತಿ ಲಭಿಸಿದೆ.