ಉಳ್ಳಾಲ, ಜ.16 (DaijiworldNews/PY): ತೊಕ್ಕೊಟ್ಟಿನಲ್ಲಿ ಭೀಫ್ ಮಾಂಸ ಮಾರಾಟದ ಶೆಡ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ತೊಕ್ಕೊಟ್ಟಿನ ನಾಗರಾಜ್(39) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ತಂಡಗಳನ್ನು ನೇಮಿಸಿ ಮೇಲಾಧಿಕಾರಿಗಳ ನಿರ್ದೇಶನದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಆದರೆ, ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈ ಬಗ್ಗೆ ಪರಿಸರದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ಈ ಸಮಯ ಓರ್ವ ವ್ಯಕ್ತಿಯು ರಾತ್ರಿಯ ಸಮಯದಲ್ಲಿ ಸಂಶಯಾಸ್ಪದವಾಗಿ ಪರಿಸರದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಅಲ್ಲದೇ, ಈ ಕೃತ್ಯವನ್ನು ನಡೆಸಿದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದ್ದು, ಅದರಂತೆ ನಾಗರಾಜ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ತೊಕ್ಕೊಟ್ಟು ಒಳಪೇಟೆಯ ಮಾರುಕಟ್ಟೆಯನ್ನು ನೂತನವಾಗಿ ನಿರ್ಮಿಸುವ ನಿಟ್ಟಿನಲ್ಲಿ ಕೆಡವಲಾಗಿತ್ತು, ಈ ಹಿನ್ನೆಲೆ ಮಾರುಕಟ್ಟೆಯ ಅಂಗಡಿಗಳಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಬೀಫ್ ಸ್ಟಾಲ್ಗಳನ್ನು ರೈಲ್ವೇ ಹಳಿಯ ಬದಿಯಲ್ಲಿ ತೆರೆಯಲಾಗಿತ್ತು. ಜ.8ರ ರಾತ್ರಿ ಇಲ್ಲಿನ ಬೀಫ್ ಸ್ಟಾಲ್ಗಳಿಗೆ ಬೆಂಕಿ ಹಚ್ಚಲಾಗಿತ್ತು.