ಪುತ್ತೂರು, ಜ.16 (DaijiworldNews/HR): ಗರ್ಭಿಣಿಯೊಬ್ಬರು ವಾಹನಕ್ಕಾಗಿ ರಸ್ತೆ ಬದಿಯಲ್ಲಿ ಕಾಯುತ್ತಿರುವುದನ್ನು ಕಂಡ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳು ತಮ್ಮ ಇಲಾಖಾ ವಾಹನದಲ್ಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

ಜನವರಿ 15 ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ತಿಮ್ಮಯ್ಯ ಗೌಡ ಅವರು ಪೊಲೀಸ್ ಕಾನ್ಸ್ಟೆಬಲ್ಗಳಾದ ಪ್ರಶಾಂತ್, ಗಿರೀಶ್ ಮತ್ತು ಮುನಿಯ ಅವರೊಂದಿಗೆ ಗಸ್ತು ತಿರುಗುತ್ತಿದ್ದರು. ಈಶ್ವರಮಂಗಲ ಗಾಳಿಮುಖದಲ್ಲಿ ರಸ್ತೆಯ ಬದಿಯಲ್ಲಿ ವಯಸ್ಸಾದ ಮಹಿಳೆಯೊಂದಿಗೆ ಗರ್ಭಿಣಿ ಮಹಿಳೆ ನಿಂತಿರುವುದನ್ನು ನೋಡಿದ ಅವರು ಇಲಾಖಾ ವಾಹನದಲ್ಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದಿದ್ದು, ಬಳಿಕ ಅಲ್ಲಿಂದ ಹೆರಿಗೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಎಎಸ್ಐ ತಿಮ್ಮಯ್ಯ ತಕ್ಷಣ ತನ್ನ ಇಲಾಖೆಯ ವಾಹನದಲ್ಲಿದ್ದ ಗರ್ಭಿಣಿ ಮತ್ತು ವೃದ್ಧ ಮಹಿಳೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಹಿಳೆ ತೀವ್ರ ಹೆರಿಗೆ ನೋವನ್ನು ಅನುಭವಿಸುತ್ತಿದ್ದಂತೆ, ಆಂಬ್ಯುಲೆನ್ಸ್ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮಹಿಳೆ ಆಂಬುಲೆನ್ಸ್ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು,ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ತಿಮ್ಮಯ್ಯ ಮತ್ತು ಸಿಬ್ಬಂದಿಗಳ ಸಮಯೋಚಿತ ಕ್ರಮವನ್ನು ಸಾರ್ವಜನಿಕರು ಪ್ರಸಂಶಿಸಿದ್ದಾರೆ.