ಮಂಗಳೂರು, ಜ.16 (DaijiworldNews/PY): "ಯುವತಿಗೆ ಖಾಸಗಿ ಬಸ್ನಲ್ಲಿ ಸಹ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ಹಾಕಿದ ಪೋಸ್ಟ್ ಅನ್ನು ನೋಡಿದ ಬಳಿಕ ಅವರನ್ನು ಸಂಪರ್ಕಿಸಲಾಗಿದ್ದು, ಯುವತಿಯೇ ಉಳ್ಳಾಲ ಠಾಣೆಗ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಒಂದು ವೇಳೆ ಯುವತಿ ದೂರು ನೀಡದೇ ಇರುತ್ತಿದ್ದರೆ ಸ್ವಯಂ ಪ್ರೇರಿತ ದೂರನ್ನು ಪೊಲೀಸರೇ ದಾಖಲಿಸುತ್ತಿದ್ದರು" ಎಂದರು.
"ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಬಸ್ನ ಚಾಲಕ ಮತ್ತು ನಿರ್ವಾಹಕನನ್ನು ವಿಚಾರಿಸಲಾಗುವುದು. ಶೀಘ್ರವೇ ಬಸ್ ಸಂಘ, ಮಾಲಕರ ಸಭೆ ಕರೆಯಲಾಗುವುದು. ಮಹಿಳೆಯ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲು ಸೂಚನೆ ನೀಡಲಾಗುವುದು" ಎಂದು ತಿಳಿಸಿದರು.
"ಬಸ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಈ ರೀತಿಯಾದ ಘಟನೆಗಳನ್ನು ತಪ್ಪಿಸಬಹುದಾಗಿದೆ. ಅಲ್ಲದೇ, ಮಹಿಳಾ ತಂಡವೊಂದನ್ನು ರಚಿಸಿ, ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಚಿಂತನೆ ನಡೆಸಿದ್ದೇವೆ" ಎಂದರು.
ಜ.14ರ ಗುರುವಾರದಂದು ಮಧ್ಯಾಹ್ನ 3.45ರ ಸುಮಾರಿಗೆ ಯುವತಿಯೊಬ್ಬಳು ಖಾಸಗಿ ಬಸ್ನಲ್ಲಿ ದೇರಳಕಟ್ಟೆಯಿಂದ ಪಂಪ್ವೆಲ್ಗೆ ತೆರಳುತ್ತಿದ್ದರು. ಈ ಸಂದರ್ಭ ಆಕೆಯ ಪಕ್ಕ ಕುಳಿತ ಸಹ ಪ್ರಯಾಣಿಕನೋರ್ವ ಆಕೆಯ ದೇಹ ಸ್ಪರ್ಶಿಸಲು ಆರಂಭಿಸಿದ್ದಾನೆ. ಈ ವೇಳೆ ಆಕೆ ವಿರೋಧ ವ್ಯಕ್ತಪಡಿಸಿದರೂ ಬಸ್ನಲ್ಲಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಆಕೆಯ ಬೆಂಬಲಕ್ಕೆ ಮುಂದಾಗಿರಲಿಲ್ಲ. ಬಳಿಕ ಯುವತಿ ಈ ಘಟನೆಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಅನ್ನು ಓದುವ ಮಹಿಳೆಯರು ಅಥವಾ ಪುರುಷರು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನಿಮಗೆ ಸಾಧ್ಯವಾದಷ್ಟು ಈ ಪೋಸ್ಟ್ ಅನ್ನು ಶೇರ್ ಮಾಡಿ. ಇದರಿಂದ ಈ ರೀತಿಯಾದಲ್ಲಿ ಮಹಿಳೆಯರು ಅಥವಾ ಹುಡುಗಿಯರು ಮೌನವಾಗಿರುವ ಬದಲು ಧ್ವನಿ ಎತ್ತುತ್ತಾರೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದರು.