ಮಂಗಳೂರು, ಜ.16 (DaijiworldNews/PY): ನಗರದ ಕಾರ್ಪೋರೇಟರ್ ಓರ್ವರು ಬಡ ಕುಟುಂಬವೊಂದಕ್ಕೆ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಒದಗಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.






ಮಾಲತಿ ಎಂಬವರು ತನ್ನ ಸಹೋದರಿಯ ಪುತ್ರನೊಂದಿಗೆ ಬೋಳಾರ್ನ ಕಲ್ಲಾವು ಎಂಬಲ್ಲಿ ವಾಸಿಸುತ್ತಿದ್ದರು. ಆರ್ಥಿಕ ಸಂಕಷ್ಟದಿಂದ ಅವರ ಮನೆಯಲ್ಲಿ ನೀರು ಹಾಗೂ ವಿದ್ಯುತ್ ಸಂಪರ್ಕವಿರಲಿಲ್ಲ.
ಈ ವಿಷಯದ ಬಗ್ಗೆ ತಿಳಿದ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಅವರು ಸ್ವಂತ ಖರ್ಚಿನಿಂದ ವಿದ್ಯುತ್ ಹಾಗೂ ನೀರಿನ ಸಂಪರ್ಕಕ್ಕೆ ವ್ಯವಸ್ಥೆ ಮಾಡಿದ್ದು, ಮನೆಗೆ ಪೈಂಟ್ ಮಾಡಿಸಿದ್ದಾರೆ. ಮನೆಯ ಕೆಲಸ ಪೂರ್ಣಗೊಂಡ ಬಳಿಕ ಮಕರ ಸಂಕ್ರಾಂತಿಯಂದು ಶಾಸಕ ವೇದವ್ಯಾಸ ಕಾಮತ್, ವಿಜಯ್ ಕುಮಾರ್ ಶೆಟ್ಟಿ, ಹಾಗೂ ಇತರ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಕುಟುಂದವರಿಗೆ ಮನೆಯನ್ನು ಹಸ್ತಾಂತರಿಸಲಾಯಿತು.
ಕೊರೊನಾದ ಸಂದರ್ಭ ಜಗದೀಶ್ ಅವರು ತಮ್ಮ ಸ್ವಂತ ಖರ್ಚಿನಿಂದ ದಿನಸಿ ಕಿಟ್ಗಳನ್ನು ನೀಡಿದ್ದರು. ಅಲ್ಲಿನ ಗ್ರಾಮಸ್ಥರು ಕಾರ್ಪೋರೇಟರ್ ಅವರ ಸಹಾಯಕ್ಕೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ವೇದವ್ಯಾಸ ಕಾಮತ್, "ಜಗದೀಶ್ ಅವರು ಕೈಗೊಂಡ ಕಾರ್ಯ ಪ್ರಶಂಸನೀಯ. ನನ್ನ ಕ್ಷೇತ್ರದ ಯಾವುದೇ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ನೀರಿನ ವ್ಯವಸ್ಥೆ ಇಲ್ಲವಾದಲ್ಲಿ ಅದನ್ನು ಪಕ್ಷದ ಕಾರ್ಯಕರ್ತರು ಅಥವಾ ಕಾರ್ಪೋರೇಟರ್ಗಳ ಗಮನಕ್ಕೆ ತರಬೇಕು ಎಂದು ನಾನು ಮನವಿ ಮಾಡುತ್ತೇನೆ. ಈ ವ್ಯವಸ್ಥೆಯನ್ನು ಒದಗಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಈ ವೇಳೆ ದೈಜಿವಲ್ಡ್ ಜೊತೆ ಮಾತನಾಡಿದ ಜಗದೀಶ್, "ಕಾಲೇಜು ದಿನಗಳಿಂದಲೂ, ಎನ್ಸಿಸಿ ಹಾಗೂ ಎನ್ಎಸ್ಎಸ್ನಿಂದಾಗಿ ಸಾಮಾಜಿಕ ಚಟುವಟಿಕೆಗಳನ್ನು ಮಾಡಲು ನನಗೆ ಸ್ಪೂರ್ತಿ ದೊರಕಿತು. ಅಲ್ಲದೇ, ನಾನು ಮಾಡುವ ಯಾವುದೇ ಸಾಮಾಜಿಕ ಕಾರ್ಯಗಳು ಪ್ರಚಾರಕ್ಕಾಗಿ ಅಲ್ಲ. ನಾನು 88 ಬಾರಿ ರಕ್ತದಾನ ಮಾಡಿದ್ದೇನೆ. ಅಲ್ಲದೇ, ನನ್ನ ನೆರೆಹೊರೆಯಲ್ಲಿ ನಾನು ಸ್ವಚ್ಛತಾ ಅಭಿಯಾನಗಳನ್ನು ನಡೆಸುತ್ತೇನೆ" ಎಂದು ಹೇಳಿದರು.
"ನಾನು ಮೊದಲ ಬಾರಿ ಮಾಲತಿ ಅವರ ಮನೆಗೆ ತೆರಳಿದಾಗ, ಮನೆಯ ಪರಿಸ್ಥಿತಿಯನ್ನು ಗಮನಿಸಿದ್ದು, ನನ್ನ ಸ್ವಂತ ಖರ್ಚಿನಿಂದ ಅವರಿಗೆ ಸಹಾಯ ಮಾಡಲು ತೀರ್ಮಾನಿಸಿದೆ. ಅಸಹಾಯಕರಿಗೆ ಸಹಾಯ ಮಾಡುವುದರಿಂದ ಸಿಗುವ ಖುಷಿಯೇ ಬೇರೆ. ಆ ಸಂತೋಷವನ್ನು ವಿವರಿಸಲು ಅಸಾಧ್ಯ. ಯಾರೇ ಇರಲಿ ಬಡವರಿಗೆ ಹಾಗೂ ನಿರ್ಗತಿಕರಿಗೆ ಸಹಾಯ ಮಾಡಲು ಮುಂದೆ ಬರಬೇಕು" ಎಂದರು.