ಮಂಗಳೂರು, ಜ 16 (DaijiworldNews/SM): ನಗರದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಬಿಕರ್ನಕಟ್ಟೆ ಬಾಲಯೇಸುವಿನ ಕ್ಷೇತ್ರದಲ್ಲಿ ವಾರ್ಷಿಕ ಹಬ್ಬವನ್ನು ವಿಜೃಂಭನೆಯಿಂದ ಆಚರಿಸಲಾಗಿದ್ದು, ಶನಿವಾರದಂದು ಸಮಾರೋಪಗೊಂಡಿದೆ. ಬಾಲ ಯೇಸುವಿನ ಮೂಲಕ ಲಭಿಸಿದ ಕೃಪಾಕಟಾಕ್ಷಗಳಿಗೆ ಕೃತಜ್ಞತೆ ಸಲ್ಲಿಸಲು ಭಕ್ತರ ದಂಡು ಕ್ಷೇತ್ರದತ್ತ ಹರಿದುಬಂದಿತ್ತು. ಸಮಾರೋಪದ ಬಲಿಪೂಜೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ವಿಶ್ರಾಂತ ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ನೆರವೇರಿಸಿ ಪ್ರವಚನ ಹಾಗೂ ಆಶಿರ್ವಚನ ನೀಡಿದರು.
































ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ವಾರ್ಷಿಕ ಮಹೋತ್ಸವ ಆಚರಿಸಲಾಗಿದ್ದು, ಭಕ್ತರು ಬಾಲ ಯೇಸು ಕ್ಷೇತ್ರಕ್ಕೆ ಬಂದು ಬಾಲಯೇಸುವಿನ ಪಾದ ಸ್ಪರ್ಶಿಸಿ ಪುಣೀತರಾದರು. ಇನ್ನು ಕಳೆದ 9 ದಿನಗಳಿಂದ ನೊವೆನಾ ಪ್ರಾರ್ಥನೆಗಳು ನಡೆದಿದ್ದು, ಭಕ್ತರ ಸಹಕಾರದಿಂದ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನೆರವೇರಿದೆ.
ಹಬ್ಬದ ಸಂದರ್ಭದಲ್ಲಿ ನೆರವಾದ ಸ್ವಯಂಸೇವಕರು, ದಾನಿಗಳು, ಪೊಲೀಸ್ ಸಿಬ್ಬಂದಿಗಳು, ರಾಜಕಾರಣಿಗಳು ಮತ್ತು ಎಲ್ಲಾ ಅಧಿಕಾರಿಗಳಿಗೆ ಸಮಾರೋಪ ಸಮಾರಂಭದಲ್ಲಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಗುರುಗಳಾದ ಫಾ. ಚಾರ್ಲ್ಸ್ ಸೆರಾವ್ , ಕ್ಷೇತ್ರದ ನಿರ್ದೇಶಕರಾದ ಫಾ. ರೋವೆಲ್ ಡಿಸೋಜಾ, ಫಾ. ಪ್ರಕಾಶ್, ಫಾ. ವಿಲ್ಫ್ರೆಡ್ ರೊಡ್ರಿಗಸ್ ಸೇರಿದಂತೆ ಹಲವು ಧರ್ಮಗುರುಗಳು ಭಾಗಿಗಳಾಗಿದ್ದರು. ಬಲಿ ಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ನಡೆಸಲಾಯಿತು.