ಮಂಗಳೂರು, ಜ. 17 (DaijiworldNews/MB) : ಮೀನುಗಾರಿಕೆ ಸಮುದಾಯವನ್ನು ಪ್ರತಿನಿಧಿಸುವ ಸಂಘವಾದ ಮೀನುಗರಿಕಾ ಸಹಕಾರ ಸಂಘವು ಜನವರಿ 17 ರ ಶನಿವಾರ ಇತ್ತೀಚೆಗೆ ಪರಿಸರ ಮಾಲಿನ್ಯದ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದ ಮೀನು ಕಾರ್ಖಾನೆಗಳಿಗೆ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿತು. ಕಾರ್ಖಾನೆಗಳು ಈ ಪ್ರದೇಶದ ಸ್ಥಳೀಯರಿಗೆ ಉದ್ಯೋಗವನ್ನು ನೀಡುತ್ತವೆ. ಅವುಗಳ ಕಾರ್ಯಾಚರಣೆಯಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಂಘವು ಪ್ರತಿಪಾದಿಸಿತು.

ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಸಂತ್ ಸುವರ್ಣ, "ಈ ಪ್ರದೇಶದಲ್ಲಿ ಕಳೆದ 60 ವರ್ಷಗಳಿಂದ ಮೀನು ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಅವರು ಸ್ಥಳೀಯರಿಗೆ ಉದ್ಯೋಗ ನೀಡಿದ್ದಾರೆ. ನಮ್ಮ ದೈನಂದಿನ ಆಹಾರ ಪಡೆಯಲು ಈ ಕಾರ್ಖಾನೆಗಳು ಸಹಾಯ ಮಾಡಿದೆ. ಕಾರ್ಖಾನೆಗಳು ಮೀನುಗಳಿಗೆ ಮಾರುಕಟ್ಟೆ ದರವನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ. ಮೀನು ಕಾರ್ಖಾನೆಗಳು ಇರುವಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನು ವಾಸನೆ ಇರುವುದು ಸಾಮಾನ್ಯ'' ಎಂದು ಹೇಳಿದರು.
"ಮಾಲಿನ್ಯದ ಬಗ್ಗೆ ಕಾರ್ಖಾನೆಗಳ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಿದವರು ಸ್ಥಳೀಯರಲ್ಲ. ಅವರು ಕಳೆದ ಎರಡು ವರ್ಷಗಳಿಂದ ನಿವೃತ್ತ ಜೀವನವನ್ನು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಸ್ಥಳೀಯರು ಯಾವುದೇ ಸಮಸ್ಯೆಯನ್ನು ಎದುರಿಸಿದಾಗಲೆಲ್ಲಾ ನಾವು ಅದನ್ನು ಕಾರ್ಖಾನೆಯ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದು ಅವರು ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ. ವಾಸ್ತವದಲ್ಲಿ, ಈ ಕಾರ್ಖಾನೆಗಳ ಕಾರ್ಯಾಚರಣೆಯಿಂದ ನಾವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿಲ್ಲ'' ಎಂದರು.
ಮುಕ್ಕಾ ಫಿಶ್ ಮಿಲ್ ಮತ್ತು ಸೀ ಫುಡ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ಜಗನ್ನಾಥ್ ಮಾತನಾಡಿ, "ಕಾರ್ಖಾನೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಕೆಲವು ಸ್ಥಳೀಯರು ದೂರಿದ್ದಾರೆ. ಅದರ ಆಧಾರದ ಮೇಲೆ, ಡಿಸೆಂಬರ್ 23 ರಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಸಭೆ ಕರೆದಿದ್ದರು. ಫಿಶ್ ಮಿಲ್ ಕೈಗಾರಿಕೆಗಳು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಭೆಯಲ್ಲಿ ಒಪ್ಪಿಕೊಂಡಿವೆ. ಜಿಲ್ಲಾಧಿಕಾರಿ ನಿರ್ದೇಶನದಂತೆ, ನಾವು ಶೇ. 95 ದಕ್ಷತೆ ಹೊಂದಿರುವ ಬಯೋ ಫಿಲ್ಟರ್ಗಳು ಮತ್ತು ಸ್ಕ್ರಬ್ಬರ್ಗಳಂತಹ ತಂತ್ರಜ್ಞಾನಗಳನ್ನು ಅಳವಡಿಸುತ್ತಿದ್ದೇವೆ. ದುರ್ವಾಸನೆಯನ್ನು ಅದು ಕಡಿಮೆ ಮಾಡುತ್ತದೆ. ಈ ಮೂಲಕ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬಹುದು. ಬಾವಾ ಫಿಶ್ಮೀಲ್ ಇಂಡಸ್ಟ್ರೀಸ್ ಕೂಡ ಸಭೆಯಲ್ಲಿ ಇದಕ್ಕೆ ಸಮ್ಮತಿಸಿದೆ. ಮಾರ್ಚ್ 31 ರ ನಂತರ ಕಾರ್ಖಾನೆಯನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ'' ಎಂದು ತಿಳಿಸಿದರು.
"ಕಾರ್ಖಾನೆಗಳ ವಿರುದ್ಧ ದೂರು ನೀಡಿದವರು ಸಹ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಪಾಲಿಸದ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಲು ಮಾರ್ಚ್ 31 ರ ಗಡುವನ್ನು ನೀಡಲಾಗಿದೆ ಎಂದು ತಿಳಿದಿದ್ದರೂ ಕೂಡಾ ಪತ್ರಿಕಾಗೋಷ್ಠಿ ನಡೆಸಿ ಮತ್ತೆ ನಮ್ಮ ಕಾರ್ಖಾನೆಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ'' ಎಂದು ಹೇಳಿದರು.
ಸ್ಥಳೀಯರಾದ ವಿಠಲ ಶ್ರೀಯಾನ್, ಕಿಶೋರ್, ವಿನೋದ್ ಕುಮಾರ್, ಪ್ರಶಾಂತ್ ಸಾಲಿಯನ್, ಸುಮನ್ ಮತ್ತು ಇತರರು ಉಪಸ್ಥಿತರಿದ್ದರು.