ಜು,02 : ಪ್ರಕೃತಿ ಚಿಕಿತ್ಸೆಯ ನೆಪದಲ್ಲಿ ಶಾಂತಿವನದಲ್ಲಿ ಕುಳಿತು ಸರಣಿಯಾಗಿ ಸಿಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಪಸ್ವರದ ಬಾಂಬ್ ಗಳಿಂದ ಗೊಂದಲದ ಗೊಜಲಿನಲ್ಲಿ ತೊಳಲಾಡುತ್ತಿದ್ದ ಸಮ್ಮಿಶ್ರ ಸರ್ಕಾರ ಸದ್ಯ ಸುಗಮವಾಗಿ ಸಾಗುವ ಲಕ್ಷಣಗಳು ಗೋಚರಿಸುತ್ತಿದೆ. ಬಜೆಟ್ ಮಂಡನೆ ಮತ್ತು ಭವಿಷ್ಯದ ಬಗ್ಗೆ ಹೇಳಿಕೆ ನೀಡಿ ಆತಂಕ ಸೃಷ್ಠಿಸಿದ್ದ ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶಾಂತರಾಗಿದ್ದಾರೆ.
ಜೆಡಿಎಸ್ ನ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸಾಲಮನ್ನಾಗೆ ಸಹಮತ ವ್ಯಕ್ತಪಡಿಸಿದ್ದರೆ, ಸಿದ್ದರಾಮಯ್ಯ ಸರ್ಕಾರದ ಯೋಜನೆಗಳನ್ನು ಮುಂದುವರಿಸಲು ಜೆಡಿಎಸ್ ಕೂಡಾ ಒಪ್ಪಿಕೊಂಡಿದೆ. ಹೀಗಾಗಿ ಇಂದಿನಿಂದ ಆರಂಭವಾಗಲಿರುವ ಸಮ್ಮಿಶ್ರ ಸರ್ಕಾರದ ಪೂರ್ಣ ಪ್ರಮಾಣದ ಅಧಿವೇಶನದ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವುದೇ ಚಿಂತೆಗಳಿಲ್ಲದೆ ಬಜೆಟ್ ಮಂಡಿಸುವ ವಾತಾವರಣ ನಿರ್ಮಾಣವಾಗಿದೆ.
ಮೈತ್ರಿ ಪಕ್ಷದ ನಾಯಕರು ಜು ೧ ರಂದು ನಡೆಸಿದ ಮಾತುಕತೆಯ ಬಳಿಕ ಮಿತ್ರ ಪಕ್ಷಗಳಲ್ಲಿ ಇದ್ದ ಪರಸ್ಪರ ಅಂಜಿಕೆ ಅನುಮಾನ ದೂರಮಾಡುವಲ್ಲಿ ಯಶಸ್ವಿಯಾಯಿತು. ಈ ಮಧ್ಯೆ ಆರ್ಥಿಕ ಮಿತವ್ಯಯ ಮತ್ತು ಸಾಲ ಮನ್ನಾಕ್ಕೆ ಹಣ ಒಟ್ತುಗೂಡಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ಕೊನೆಯ ಬಜೆಟ್ನಲ್ಲಿ ಘೋಷಿಸಿದ್ದ ಕೆಲವು ಹೊಸ ಯೋಜನೆಗಳನ್ನು ಈ ಬಜೆಟ್ನಲ್ಲಿ ಕೈಬಿಡುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.