ಮಂಗಳೂರು, ಜು 1: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇತರರು ಮಾಡಿದ ಅಭಿವೃದ್ದಿ ಕಾರ್ಯಗಳನ್ನು ತಾನು ಮಾಡಿದ್ದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದು, ಇವರು ಶತ ಸೋಂಬೇರಿ ಸಂಸದರು ಎಂದು ಮಾಜಿ ಸಚಿವ ರಮಾನಾಥ ರೈ ಟೀಕಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜು. 2 ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಸದ ನಳಿನ್ ಅವರು ಯಾವಾಗಲೂ ಸರ್ಕ್ಯೂಟ್ ಹೌಸ್ನಲ್ಲಿಯೇ ಮಲಗಿರುತ್ತಾರೆ. ಡಾಲರ್ ಏನು ಅನ್ನೋದು ನಳಿನ್ಗೆ ಗೊತ್ತಿಲ್ಲ ,ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದರಾಗ್ತಾರೆ. ಅಲ್ಲದೆ ನಳೀನ್ ಅವರಿಗೆ ಜವಬ್ದಾರಿಯುತ ಕೆಲಸಗಳನ್ನು ನಿರ್ವಹಿಸಿಯೇ ತಿಳಿದಿಲ್ಲ. ಆದರೆ ತಮ್ಮಿಂದ ತಪ್ಪುಗಳು ನಡೆದಾಗ ಅದನ್ನು ಇತರ ಮೇಲೆ ಅಪವಾದ ಮಾಡುವುದನ್ನು ಚೆನ್ನಾಗಿ ಬಲ್ಲವರು. ಅಲ್ಲದೆ ಕೋಮು ಪ್ರಚೋದನಾ ಭಾಷಣ, ಗಲಾಟೆಗೆ ಕಾರಣವಾಗುವ ಕೆಲಸವನ್ನು ಮಾಡುತ್ತಾರೆ ವಿನಾಃ ಅಭಿವೃದ್ಧಿ ಕೆಲಸವನ್ನು ಅವರು ಮಾಡಿಲ್ಲ ಎಂದು ಆರೋಪಿಸಿದರು.
ಮಂಗಳೂರು- ಸೋಲಾಪುರ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ , ಆಗ ಶಾಸಕರಾಗಿದ್ದ ಮೊಯ್ದಿನ್ ಬಾವ, ರಮಾನಾಥ ರೈ ,ಅಭಯಚಂದ್ರ ಜೈನ್ ಕಾರಣ ಎಂದು ನಳೀನ್ಹೇ ಳಿದ್ದಾರೆ. ತಮ್ಮ ತಪ್ಪನ್ನು ಇತರರ ಮೇಲೆ ಕಟ್ಟಲು ಹೊರಟಿರುವ ಸಂಸದ ನಳಿನ್ ಕುಮಾರ್ ,ಆ ಕ್ಷೇತ್ರದ ಕಾರ್ಕಳ ಶಾಸಕರನ್ನು ಅವರು ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದೇ ರಸ್ತೆ ಕಾಮಗಾರಿಗಾಗಿ ನಾನು ಸಚಿವನಾಗಿದ್ದ ಸಂದರ್ಭ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಉಪಸ್ಥಿತಿಯಲ್ಲಿ ಮೂರು ಸಭೆ ಮಾಡಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಆದರೆ ಆ ಮೂರು ಸಭೆಗಳಿಗೂ ಸಂಸದರು ಬಂದಿರಲಿಲ್ಲ ಎಂಬುವುದನ್ನು ನೆನಪಿಕೊಳ್ಳಬೇಕಾಗುತ್ತದೆ ಎಂದರು.
ಲೇಡಿಗೋಷನ್ ಆಸ್ಪತ್ರೆ ಎಂಆರ್ಪಿಎಲ್ನ ಸಿಎಸ್ಆರ್ ನಿಧಿಯಿಂದ ಪ್ರಾರಂಭವಾಗಿತ್ತು. ಇದಕ್ಕಾಗಿ ಸುಮಾರು 10 ಸಭೆಗಳಾದರೂ ನಡೆದಿವೆ. ಹಿಂದೆ ಗುತ್ತಿಗೆ ವಹಿಸಿದ್ದವರು ಅರ್ಧದಲ್ಲೇ ಕೈ ಬಿಟ್ಟಾಗ ಬೇರೆ ಗುತ್ತಿಗೆಯವರನ್ನು ನೇಮಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶಿರಾಡಿ ಘಾಟಿಯ ಪ್ರಥಮ ಹಂತ ಕಾಮಗಾರಿ ರಾಜ್ಯ ಸರಕಾರದ ಅಧೀನದ ರಾಷ್ಟ್ರೀಯ ಹೆದ್ದಾರಿ ಮೂಲಕ ನಡೆಸಲಾಗಿದೆ. ಇದೀಗ ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಪ್ರಥಮ ಹಂತದ ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಸಲಾಗಿದೆ. ದ್ವಿತೀಯ ಹಂತದ ಕಾಮಗಾರಿಯನ್ನು ಹೈದರಾಬಾದ್ನ ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಅರಣ್ಯ ಇಲಾಖೆಗೆ ಸಂಬಂಧಿಸಿದ ಒಪ್ಪಿಗೆಯನ್ನೂ ಹಿಂದೆಯೇ ನೀಡಲಾಗಿದೆ. 41 ಕೋಟಿ ರೂ.ಗಳ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ವಿಮಾನ ನಿಲ್ದಾಣದ ಸಂಪರ್ಕ ರಸ್ತೆ, ಅಂಬೇಡ್ಕರ್ ಭವನ, ಪಶು ವೈದ್ಯಕೀಯ ಕಾಲೇಜು, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆ ಹೀಗೆ ಹಲವಾರು ಕಾಮಗಾರಿಗಳು ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿದ್ದರೂ, ಏನೂ ಅಭಿವೃದ್ಧಿ ಆಗಿಲ್ಲ ಎಂಬಂತೆ ಸಂಸದರು ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ರೈ ಅಸಮಾಧಾನ ವ್ಯಕ್ತಪಡಿಸಿದರು.
ಕೆಲವು ವರ್ಷಗಳ ಹಿಂದೆ ಬಳ್ಳಾರಿ ಗಣಿಗಾರಿಕೆಯ ಕೇಂದ್ರವಾಗಿತ್ತು, ಆ ಕಾರಣದಿಂದಾಗಿ ಬಳ್ಳಾರಿ ವಾತಾವರಣವೇ ಬದಲಾಯಿತು. ಅಲ್ಲಿನ ನೀರು, ಕಟ್ಟಡ ಮರಗಿಡಗಳು ಸಂಪೂರ್ಣವಾಗಿ ಕಲುಷಿತಗೊಂಡಿತು. ಅದ್ರೆ ಈಗ ಹಸಿರಾಗಿದೆ. ಜಿಂದಾಲ್ ಕಂಪಿಯಿಂದ 40 ಹೆಕ್ಟೇರ್ ಜಮೀನು ಒದಗಿಸಿ ಅರಣ್ಯೀಕರಣಗೊಳಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ಐದು ವರ್ಷಗಳ ಕಾಂಗ್ರೆಸ್ ಸರಕಾರ ಅಭಿವೃದ್ಧಿಯ ಸುವರ್ಣ ಯುಗವಾಗಿತ್ತು ಎಂದು ಬಣ್ಣಿಸಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ದೊರಕಲಿದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ, ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಷ್ಟೇ ಎಂದು ಹೇಳಿದರು .ಉಳಿದಂತೆ ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಭಾಸ್ಕರ ಮೊಯ್ಲಿ, ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಶಾಹುಲ್ ಹಮೀದ್, ನವೀನ್ ಡಿಸೋಜ, ಪ್ರತಿಭಾ ಕುಳಾಯಿ, ಅಶೋಕ್ ಡಿ.ಕೆ., ಶಾಲೆಟ್ ಪಿಂಟೋ ಮುಂತಾದವರು ಉಪಸ್ಥಿತರಿದ್ದರು.