ಮಂಗಳೂರು / ಉಡುಪಿ, ಜ. 17 (DaijiworldNews/MB) : ಜನವರಿ 16 ರ ಶನಿವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರಾರಂಭವಾದ ಕೊರೊನಾ ಲಸಿಕಾ ಅಭಿಯಾನದಲ್ಲಿ 515 ಆರೋಗ್ಯ ಕಾರ್ಯಕರ್ತರು ಲಸಿಕೆಗಳನ್ನು ಪಡೆದರು.

ಮೊದಲ ದಿನ ದಕ್ಷಿಣ ಕನ್ನಡದಲ್ಲಿ 229 ಜನರಿಗೆ ಲಸಿಕೆ ನೀಡಿದರೆ, ಉಡುಪಿ ಜಿಲ್ಲೆಯಲ್ಲಿ 286 ಮಂದಿಗೆ ಲಸಿಕೆ ನೀಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ಲಸಿಕೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರಿನ ತಾಲ್ಲೂಕು ಆಸ್ಪತ್ರೆಗಳಲ್ಲಿ ನೀಡಲಾಗಿದೆ. ಉಡುಪಿಯಲ್ಲಿ ಕೊರೊನಾ ಲಸಿಕೆಯನ್ನು ಉಡುಪಿ ಜಿಲ್ಲಾ ಆಸ್ಪತ್ರೆ, ಡಾ ಟಿಎಂಎ ಪೈ ಆಸ್ಪತ್ರೆ, ಕುಂದಾಪುರ ತಾಲ್ಲೂಕು ಆಸ್ಪತ್ರೆ ಮತ್ತು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲಾಯಿತು.
ದಕ್ಷಿಣ ಕನ್ನಡದಲ್ಲಿ ವೆನ್ಲಾಕ್ನ ಆಯುಷ್ ಆಸ್ಪತ್ರೆಯಲ್ಲಿ 20 ಜನರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್ನಲ್ಲಿ 45 ಮಂದಿಗೆ, ಬಂಟ್ವಾಳ ತಾಲ್ಲೂಕು ಆಸ್ಪತ್ರೆಯಲ್ಲಿ 40, ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಯಲ್ಲಿ 35, ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ 45 ಮತ್ತು ಪುತ್ತೂರು ತಾಲ್ಲೂಕು ಆಸ್ಪತ್ರೆಯಲ್ಲಿ 45 ಜನರಿಗೆ ಲಸಿಕೆ ನೀಡಲಾಯಿತು.
''ಲಸಿಕೆಗಾಗಿ 600 ಜನರು ನೋಂದಾಯಿಸಿದ್ದರೂ, ಕೇವಲ 229 ಜನರಿಗೆ ಮಾತ್ರ ಮೊದಲ ದಿನ ಲಸಿಕೆ ನೀಡಲಾಗಿದೆ. ಶನಿವಾರ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದವರಿಗೆ ಇನ್ನೊಂದು ಬಾರಿ ಲಸಿಕೆ ಹಾಕಿಸಿಕೊಳ್ಳುವ ಅವಕಾಶ ನೀಡಲಾಗುವುದು'' ಎಂದು ಆರ್ಸಿಎಚ್ ಅಧಿಕಾರಿ ಡಾ.ರಾಜೇಶ್ ಹೇಳಿದರು.
''ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 52,381 ಜನರು ಮೊದಲ ಹಂತದಲ್ಲಿ ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ಎರಡನೇ ಹಂತದಲ್ಲಿ ಕಂದಾಯ, ನಾಗರಿಕ ಆಡಳಿತ, ಪೊಲೀಸ್ ಸೇರಿದಂತೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಸಿಕೆ ಹಾಕಲಾಗುವುದು. ಆ್ಯಪ್ ಮೂಲಕ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಜನವರಿ 20 ರೊಳಗೆ ಪಟ್ಟಿ ಸಿದ್ಧವಾಗಬೇಕಿದೆ. ಜನವರಿ 25 ರೊಳಗೆ ಲಸಿಕೆಗಳ ಬೇಡಿಕೆಯನ್ನು ಅಪ್ಲಿಕೇಶನ್ನಲ್ಲಿ ಸಲ್ಲಿಸಬೇಕಾಗಿದೆ'' ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ.ರಾಜೇಶ್ ಮಾಹಿತಿ ನೀಡಿದರು.
"ಉಡುಪಿ ಜಿಲ್ಲೆಯಲ್ಲಿ, ಕೊರೊನಾ ವೈರಸ್ ಲಸಿಕೆಯನ್ನು 286 ಜನರಿಗೆ ನೀಡಲಾಗಿದೆ. 28 ದಿನಗಳ ನಂತರ ಈ ಜನರಿಗೆ ಎರಡನೇ ಡೋಸ್ ನೀಡಲಾಗುವುದು" ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದರು.
ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕೆಲವು ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದ ಕಾರಣ ನಾವು ಗುರಿ ತಲುಪಲು ಸಾಧ್ಯವಾಗಿಲ್ಲ. ಮುಂದಿನ ಹಂತದಲ್ಲಿ ಅವರಿಗೆ ಮನವರಿಕೆ ಮಾಡಿ ಲಸಿಕೆ ನೀಡಲಾಗುವುದು. ಒಟ್ಟು ಇಂದಿನ ಗುರಿಯ ಶೇ. 53 ರಷ್ಟು ಜನರು ಲಸಿಕೆ ಪಡೆದಿದ್ದಾರೆ. ಟಿಎಂಎ ಪೈ ಆಸ್ಪತ್ರೆಯಲ್ಲಿ ಶೇ. 83 ಗುರಿಯನ್ನು ಸಾಧಿಸಲಾಗಿದೆ. ಕಂಡ್ಲೂರು ಕೇಂದ್ರದಲ್ಲಿ ತಮ್ಮನ್ನು ನೋಂದಾಯಿಸಿಕೊಂಡ ಎಲ್ಲಾ 38 ಜನರು ಲಸಿಕೆ ತೆಗೆದುಕೊಂಡಿರುವುದು ನಿಜಕ್ಕೂ ಶ್ಲಾಘನೀಯ" ಎಂದು ಹೇಳಿದರು.
ಲಸಿಕೆ ಪ್ರಕ್ರಿಯೆಯ ವಿವರಗಳನ್ನು ನೀಡಿದ ಡಿಎಂಒ ಡಾ.ಸುಧೀರ್ಚಂದ್ರ ಸೂಡಾ, "ಪ್ರತಿ ಮೂರು ನಿಮಿಷಕ್ಕೆ ಒಬ್ಬ ವ್ಯಕ್ತಿಗೆ ಲಸಿಕೆ ನೀಡಲಾಯಿತು. ಈ ಕಾರ್ಯಕ್ರಮವು ಭಾನುವಾರವೂ ಕೆಲವು ಕೇಂದ್ರಗಳಲ್ಲಿ ಮುಂದುವರಿಯುತ್ತದೆ. ಬುಧವಾರದಿಂದ ಈ ಪ್ರಕ್ರಿಯೆಯು ನಿರಂತರವಾಗಿರುತ್ತದೆ. ಮೊದಲ ಹಂತದಲ್ಲಿ 22,333 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ 12,000 ಬಾಟಲಿ ಲಸಿಕೆಗಳು ಲಭ್ಯವಿದೆ" ಎಂದು ಮಾಹಿತಿ ನೀಡಿದರು.
"ಕೋವಾಕ್ಸಿನ್ನ ಒಂದು ಬಾಟಲಿಯಲ್ಲಿ 10 ಮಿಲಿ ಇದ್ದು ಅದರಲ್ಲಿ 20 ಜನರಿಗೆ ಲಸಿಕೆ ನೀಡಬಹುದು. ಕೋವಿಶೀಲ್ಡ್ನ ಒಂದು ಬಾಟಲಿಯಲ್ಲಿ 5 ಮಿಲಿ ಇದ್ದು, ಇದು 10 ಜನರಿಗೆ ಲಸಿಕೆ ಹಾಕಲು ಸಾಕಾಗುತ್ತದೆ. ಕೊರೊನಾ ಮುಂಚೂಣಿ ಯೋಧರು ಸೇರಿದಂತೆ ಎರಡನೇ ಹಂತದಲ್ಲಿ ಫಲಾನುಭವಿಗಳ ಪಟ್ಟಿಯನ್ನು ಜನವರಿ 20 ರೊಳಗೆ ಅಂತಿಮಗೊಳಿಸಲಾಗುತ್ತದೆ" ಎಂದು ತಿಳಿಸಿದರು.
ಮೊದಲ ದಿನ ಲಸಿಕೆ ಪಡೆದವರಲ್ಲಿ ಡಿಎಂಒ ಡಾ.ಸುಧೀರ್ಚಂದ್ರ ಸೂಡಾ, ತಾಯಿ ಮತ್ತು ಮಕ್ಕಳ ಕಲ್ಯಾಣ ವಿಭಾಗದ ಅಧಿಕಾರಿ ಡಾ.ಎಂ.ಜಿ.ರಾಮ ಮತ್ತು ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಸೇರಿದ್ದಾರೆ.