ಉಡುಪಿ, ಜ.17 (DaijiworldNews/PY): "ಕೇಂದ್ರ ಸರಕಾರದ ಸಾಗರ್ ಮಾಲಾ ಯೋಜನೆಯಡಿಯಲ್ಲಿ ಸುಮಾರು 800 ಕೋಟಿಯ ವೆಚ್ಚದಲ್ಲಿ ಮರೀನಾ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಇನ್ನೂ ಮಂಜೂರಾಗಿಲ್ಲ ಇದರ ಕುರಿತಾಗಿ ಅಧ್ಯಯನ ಮಾತ್ರ ನಡೆಯುತ್ತಿದೆ" ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.

ಪಡುಕೆರೆಯಲ್ಲಿ ಮರೀನಾ ಯೋಜನೆಗೆ ವಿರೋದ ವ್ಯಕ್ತವಾದ ಹಿನ್ನಲೆಯಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, "ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 71 ಲಕ್ಷ ವೆಚ್ಚದಲ್ಲಿ ಪುಣೆಯಲ್ಲಿರುವ ಸಿಡ್ಲ್ಯೂಪಿಆರ್ಎಸ್ ಸಂಸ್ಥೆಯ ವತಿಯಿಂದ ಈ ಯೋಜನೆಯಿಂದ ಇಲ್ಲಿನ ಜನಜೀವನ ಮತ್ತು ಸ್ಥಳೀಯ ಮೀನುಗಾರರಿಗೆ ಏನಾದರೂ ತೊಂದರೆ ಇದೆಯೇ ಎಂಬ ಕುರಿತಾಗಿ ಅಧ್ಯಯನ ಮಾಡಲಾಗುವುದು. ಮುಂದಿನ 8 ತಿಂಗಳಲ್ಲಿ ಇದರ ವರದಿ ಲಭ್ಯವಾಗಲಿದೆ. ತದನಂತರ ಸ್ಥಳಿಯರು ಮತ್ತು ಮೀನುಗಾರರೊಂದಿಗೆ ಚರ್ಚಿಸಿ ಮುಂದಿನ ಯೋಜನೆಯನ್ನು ರೂಪಿಸಲಾಗುವುದು" ಎಂದು ತಿಳಿಸಿದರು.
"ಮೀನುಗಾರ ಮತ್ತು ಸ್ಥಳೀಯರಿಗೆ ಯಾವುದೇ ತೊಂದರೆ ಇಲ್ಲ ಎಂಬಲ್ಲಿ ಮಾತ್ರ ಮರೀನಾ ನಿರ್ಮಾಣ ಮಾಡುತ್ತೇವೆ. ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ. ಇಡೀ ದೇಶದ ಆರ್ಥಿಕತೆ ಕೊಡುಗೆ ನೀಡುವ ಯೋಜನೆ ಇದು" ಎಂದರು.