ಬ್ರಹ್ಮಾವರ, ಜ. 18 (DaijiworldNews/MB) : ಸಾಲಿಗ್ರಾಮದ ವಾರ್ಷಿಕ ಜಾತ್ರೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮತ್ತು ಜಿಲ್ಲಾ ನಾಗರಿಕ ಸೇವಾ ಸಮಿತಿಯ ಸಹಯೋಗದೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಂಟಿಯಾಗಿ ಪ್ರಾರಂಭಿಸಿದ ಕಾರ್ಯಾಚರಣೆಯಲ್ಲಿ, ವ್ಯಾಪಾರ ಮತ್ತು ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸಲಾಗಿದೆ.



ರಾಜಸ್ಥಾನದ ಕುಟುಂಬಗಳ ಜೊತೆಗೆ ಅವರ ಮಕ್ಕಳು ಕೂಡ ಬಲೂನ್ ಮಾರಾಟದಲ್ಲಿ ನಿರತರಾಗಿರುವುದನ್ನು ತಂಡ ಗಮನಿಸಿದೆ. ಎಂಟು ಬಾಲಕಿಯರನ್ನು ಮತ್ತು ನಾಲ್ಕು ಬಾಲಕರನ್ನು ರಕ್ಷಿಸಿದೆ. ಹಾಗೆಯೇ ಮಕ್ಕಳನ್ನು ವ್ಯಾಪಾರ, ದುಡಿಮೆಯಲ್ಲಿ ತೊಡಗಿಸದಂತೆ ಅವರಿಗೆ ಶಿಕ್ಷಣ ನೀಡುವಂತೆ ಪೋಷಕರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರನ್ನು ತಮ್ಮ ಊರಿಗೆ ಹಿಂತಿರುಗುವಂತೆ ರೈಲ್ವೆ ನಿಲ್ದಾಣಕ್ಕೆ ಕಳುಹಿಸಲಾಗಿದೆ.
ಜಾತ್ರೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಸುಮಾರು 16 ಮಕ್ಕಳನ್ನು ಭಿಕ್ಷಾಟನೆ ಮಾಡುವುದನ್ನು ನಿಲ್ಲಿಸಿ ಪೋಷಕರೊಂದಿಗೆ ಕಳುಹಿಸಲಾಗಿದೆ. ಮಕ್ಕಳು ದುಡಿಯುವುದು ಅಥವಾ ಭಿಕ್ಷಾಟನೆ ಮಾಡುವುದು ಅಪರಾಧವಾಗಿದೆ ಎಂದು ತಿಳಿಸಿರುವ ಇಲಾಖೆಯು ಮಕ್ಕಳಿಗೆ ಶಿಕ್ಷಣ ನೀಡಲು ಬಯಸಿದೆ.
ಜಿಲ್ಲಾ ಮಕ್ಕಳ ಸಂರಕ್ಷಣಾ ಅಧಿಕಾರಿ ಸದಾನಂದ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಕಣ್ಗಾವಲು ಅಧಿಕಾರಿ ಪ್ರಭಾಕರ್ ಆಚಾರ್, ಕೋಟಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಂತೋಷ್ ಬಿಪಿ, ಸಹಾಯಕ ಸಬ್ಇನ್ಸ್ಪೆಕ್ಟರ್ ಮುಕ್ತಾ, ಪಟ್ಟಣ ಪಂಚಾಯತ್ ಸಾಲಿಗ್ರಾಮ ಮುಖ್ಯ ಅಧಿಕಾರಿ ಅರುಣ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕಪಿಲ್, ಸಾಮಾಜಿಕ ಕಾರ್ಯಕರ್ತರಾದ ಯೋಗೀಶ್, ಸುರಕ್ಷ ಮತ್ತು ಸಂದೇಶ್, ಹಾಗೆಯೇ ಜಿಲ್ಲೆಯ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ವೊಲ್ಲಕಾಡು ಮತ್ತು ತಾರನಾಥ್ ಮೇಸ್ತಾ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷ ಸುಲತಾ ಹೆಗ್ಡೆಯವರ ತಂಡವೂ ಕೂಡಾ ರಕ್ಷಣಾ ಕಾರ್ಯದಲ್ಲಿ ಜೊತೆಯಾದರು.