ಮಂಗಳೂರು, ಜ. 18 (DaijiworldNews/MB) : ''ನಗರ ಹೊರವಲಯದ ಬಡಗ ಎಕ್ಕಾರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ, ಗಲಭೆಗಳನ್ನು ನಿಯಂತ್ರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎಎಫ್) ಘಟಕ ಯಾರ ಅರಿವಿಗೂ ಬಾರದಂತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಸ್ಥಳಾಂತಸಲಾಗಿದೆ'' ಎಂದು ಆರೋಪಿಸಿರುವ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ)ನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ''ಇದು ಜಿಲ್ಲೆಗೆ ಮಾಡಿದ ಅನ್ಯಾಯ, ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಶಿವಮೊಗ್ಗಕ್ಕೆ ಸ್ಥಳಾಂತರಕ್ಕೆ ನಳಿನ್ ವೈಫಲ್ಯ ಕಾರಣ'' ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ವೈಫಲ್ಯ ಎಂದು ಹೇಳಿದ ಮುನೀರ್, ''ಈ ವೈಫಲ್ಯದ ಜವಾಬ್ದಾರಿಯನ್ನು ಸಂಸದರು ವಹಿಸಿಕೊಂಡು ಜಿಲ್ಲೆಯ ಜನರಲ್ಲಿ ಕ್ಷಮೆಯಾಚಿಸಬೇಕು ಮತ್ತು ವಿವರಣೆ ನೀಡಬೇಕು'' ಎಂದು ಆಗ್ರಹಿಸಿದರು.
"ದಕ್ಷಿಣ ಕನ್ನಡದಂತಹ ಕೋಮು ಸೂಕ್ಷ್ಮ ಜಿಲ್ಲೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಅತ್ಯಗತ್ಯ. ಕೋಮು ಹಿಂಸಾಚಾರ ಸಂಭವಿಸುವ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮಂಗಳೂರು ಒಂದು ಕೇಂದ್ರ ಭಾಗವಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯು ಮಂಗಳೂರಿನಲ್ಲಿ ಸ್ಥಾಪನೆಯಾದರೆ, ಅದು ವಿಮಾನ ನಿಲ್ದಾಣ ಸಹಿತ ಸಾರಿಗೆ ಸಂಪರ್ಕದ ಸೌಲಭ್ಯದಿಂದಾಗಿ ದೂರದ ಜಿಲ್ಲೆಗಳಿಗೂ ತಲುಪಲು ಅನುಕೂಲಕರವಾಗಿತ್ತು. ದ.ಕ. ಜಿಲ್ಲೆಯಲ್ಲಂತೂ ಈ ಘಟಕದ ಕಾರ್ಯಾಚರಣೆಯು ಹಲವು ಹಿಂಸಾಚಾರಗಳಿಗೆ ಕಡಿವಾಣ ಹಾಕುವ ಸಹಕಾರಿಯಾಗಿತ್ತು. ಆ ಹಿನ್ನಲೆಯಲ್ಲಿಯೇ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದಲ್ಲಿ ಐವತ್ತು ಎಕರೆ ಸ್ಥಳವನ್ನು ಗುರುತಿಸಿ ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕಕ್ಕಾಗಿ ಕಾದಿರಿಸಲಾಗಿತ್ತು'' ಎಂದು ಮುನೀರ್ ತಿಳಿಸಿದರು.
''ಬಳಿಕ ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕಕ್ಕೆ ಹೆಚ್ಚುವರಿ ಭೂಮಿಯನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿತ್ತು. ಈಗ ಯಾವುದೇ ಚರ್ಚೆಯಿಲ್ಲದೆ, ಜನರನ್ನು ಕತ್ತಲೆಯಲ್ಲಿರಿಸಿಕೊಂಡು, ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕವನ್ನು ಯಾವ ರೀತಿಯಿಂದಲೂ ಸೂಕ್ತವಲ್ಲದ ಭದ್ರಾವತಿಗೆ ರಾತ್ರೋರಾತ್ರಿ ಸ್ಥಳಾಂತರಿಸಿ ಶಿಲಾನ್ಯಾಸ ನೆರವೇರಿಸಲಾಗಿದೆ. ಇದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ, ಪ್ರಚೋದನಕಾರಿ ಭಾಷಣಗಳಿಗೆ ಹೆಸರುವಾಸಿಯಾದ ನಳಿನ್ ಅವರಅಸಮರ್ಥತೆಯೇ ನೇರ ಕಾರಣವಾಗಿದೆ'' ಎಂದು ಟೀಕಿಸಿದರು.
"ಜಿಲ್ಲೆಯ ಪರಿಸರವನ್ನು ಕಲುಷಿತಗೊಳಿಸುವ ಯೋಜನೆಗಳನ್ನು ಮಂಗಳೂರಿಗೆ ಡಂಪ್ ಮಾಡಲು ಅವಕಾಶ ನೀಡುವ ಸಂಸದರು. ಜನರ ಪರವಾದ ಯೋಜನೆಗಳ ಬಗ್ಗೆ ಮೌನವಾಗಿದ್ದಾರೆ. ಈ ಮೂಲಕ ಮಂಗಳೂರಿನ ಜನತೆಗೆ ಅನ್ಯಾಯ ಮಾಡಿದ್ದಾರೆ. ಈ ಹಿಂದೆ ಕರಾವಳಿಯ ಬ್ಯಾಂಕುಗಳು ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನ, ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ಹಸ್ತಾಂತರ, ಇದೀಗ ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಸ್ಥಳಾಂತರ ಸಂಸದರ ವೈಫಲ್ಯಗಳ ಪಟ್ಟಿಯನ್ನು ಹೆಚ್ಚಿಸುತ್ತಿದೆ'' ಎಂದು ಮುನೀರ್ ಕಾಟಿಪಳ್ಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.