ಕಾಸರಗೋಡು, ಜ.19 (DaijiworldNews/MB) : ಕಾಸರಗೋಡು ನಗರಸಭೆಯಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಇಬ್ಬರು ಮುಸ್ಲಿಂ ಲೀಗ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲ ಮುಸ್ಲಿಂ ಲೀಗ್ನಲ್ಲಿ ಭಿನ್ನಮತಕ್ಕೂ ಕಾರಣವಾಗಿದೆ.

ಸೋಮವಾರ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸದಸ್ಯರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದು ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದಾರೆ.
ಮುಸ್ಲಿಂ ಲೀಗ್ ಮುಖಂಡರ ಲೋಪ ಬಿಜೆಪಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಲಭಿಸಲು ಕಾರಣ ಎಂದು ಆರೋಪಿಸಿ ಮಮ್ಮು ಚಾಲ ಮತ್ತು ಆಸ್ಮಾ ಮುಹಮ್ಮದ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಗರಸಭೆಯ 12 ಮತ್ತು 13 ನೇ ವಾರ್ಡ್ ಸದಸ್ಯರಾಗಿದ್ದಾರೆ.
ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಮ್ಮು ಚಾಲ ಮತ್ತು ಬಿಜೆಪಿಯ ರಜನಿ ತಲಾ ಮೂರು ಮತಗಳನ್ನು ಪಡೆದರು. ಇದರಿಂದ ಚೀಟಿ ಎತ್ತುವಿಕೆ ನಡೆದಾಗ ಬಿಜೆಪಿಯ ರಜನಿಗೆ ಅದೃಷ್ಟ ಒಲಿಯಿತು.
1995- 2000 ರ ಬಳಿಕ ಮೊದಲ ಬಾರಿ ಬಿಜೆಪಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಲಭಿಸುತ್ತಿದ್ದು, ಮುಸ್ಲಿಂ ಲೀಗ್ ಮುಖಂಡರ ಧೋರಣೆ ಬಿಜೆಪಿಗೆ ಬೆಳೆಯಲು ಅವಕಾಶ ಲಭಿಸಿದೆ ಎಂದು ಮುಸ್ಲಿಂ ಲೀಗ್ನ ಸದಸ್ಯರಿಬ್ಬರು ಆರೋಪಿಸಿದ್ದು, ಸಿಪಿಎಂ ಮತ್ತು ಮುಸ್ಲಿಂ ಲೀಗ್ನ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದ ಸದಸ್ಯರ ಬೆಂಬಲ ಪಡೆಯುತ್ತಿದ್ದಲ್ಲಿ ಬಿಜೆಪಿಗೆ ಅವಕಾಶ ಲಭಿಸುತ್ತಿರಲಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ.