ಉಡುಪಿ, ಜ.19 (DaijiworldNews/PY): ರಾಜ್ಯ ಪಶುಸಂಗೋಪನಾ ಸಚಿವ ಪ್ರಭಭು ಚೌಹಾಣ್ ಅವರು ಜ.19ರ ಮಂಗಳವಾರ ಬೆಳಗ್ಗೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದು, ಗೋಹತ್ಯೆ ವಿರೋಧಿ ಕಾಯ್ದೆಯ ಅನುಷ್ಠಾನ ಹಾಗೂ ಕಾಯ್ದೆಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.



ರಾಜ್ಯದಲ್ಲಿ 6,000 ಪಶುವೈದ್ಯ ಅಧಿಕಾರಿಗಳನ್ನು ಶೀಘ್ರದಲ್ಲೇ ನೇಮಕ ಮಾಡುವುದಾಗಿ ಘೋಷಿಸಿದರು.
ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ಈ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದು, ಗೋಹತ್ಯೆ ವಿರೋಧಿ ಕಾಯ್ದೆಯನ್ನು ಜಾರಿಗೆ ತರಲು ಅವರು ಕೈಗೊಂಡ ಯೋಜನೆಯ ಬಗ್ಗೆ ನೆನಪಿಸಿಕೊಂಡರು. ಬಳಿಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಿದರು.
ಗೋಮಾಳ ಭೂಮಿಯನ್ನು ಗುತ್ತಿಗೆಯ ಆಧಾರದಲ್ಲಿ ಗೋಶಾಲೆಗಳಿಗೆ ಪರಬಾರೆ ಮಾಡುವ ವಿಚಾರದ ಬಗ್ಗೆ ಹಾಗೂ ದೇವಸ್ಥಾನ ಹಾಗೂ ಸಹಕಾರ ಸಂಘ ಬ್ಯಾಂಕ್ಗಳ ಆದಾಯದ ಒಂದು ಭಾಗವನ್ನು ಗೋಶಾಲೆಗಳಿಗೆ ನೀಡುವ ಕುರಿತು ಸಿಎಂ ಅವರಿಗೆ ಮನವಿ ಮಾಡಲಾಗಿದೆ ಎಂದು ಶ್ರೀಗಳಿಗೆ ತಿಳಿಸಿದರು. ಇವುಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ತರುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ತಾಲೂಕುವರು ಎರಡು ಗೋಶಾಲೆಗಳನ್ನು ನಿರ್ಮಿಸಲಾಗುವುದು. ಕಾನೂನು ಜಾರಿಗೆ ತರಲು ಶ್ರಮಿಸಿದ ಸಚಿವರನ್ನು ಪೇಜಾವರ ಶ್ರೀಗಳು ಸನ್ಮಾನಿಸಿದರು.
ಈ ಸಂದರ್ಭ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ.ಸುರೇಶ್ ಗೌಡ ಉಪಸ್ಥಿತರಿದ್ದರು. ಮಠದ ಪರವಾಗಿ, ಕೃಷ್ಣ ಭಟ್, ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಮೂರ್ತಿ ಆಚಾರ್ಯ, ಮಹೇಶ್ ಕುಲಕರ್ಣಿ, ಹಾಗೂ ವಿದ್ಯಾರ್ಥಿಗಳು ಸಚಿವರನ್ನು ಸ್ವಾಗತಿಸಿದರು.