ಮಂಗಳೂರು, ಜ.20 (DaijiworldNews/MB) : ಉರ್ವಾಸ್ಟೋರ್ನ ಅಂಗಡಿಗುಡ್ಡೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣವು ಸುಮಾರು ಒಂದು ವರ್ಷದ ಹಿಂದೆಯೇ ಪೂರ್ಣಗೊಂಡಿದೆ. ಈ ಯೋಜನೆಗೆ ಸರ್ಕಾರ 17.82 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಆದರೆ ಈವರೆಗೆ ಕಟ್ಟಡವನ್ನು ಉದ್ಘಾಟಿಸಿಲ್ಲ.

ಈ ಯೋಜನೆಗೆ 2012-13ರಲ್ಲಿ ಅನುಮತಿ ನೀಡಲಾಗಿತ್ತು. ಆದರೆ 2017 ರ ಜನವರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಅಡಿಪಾಯ ಕಲ್ಲು ಹಾಕಿದ ಅಂದಿನ ಸಮಾಜ ಕಲ್ಯಾಣ ಸಚಿವ ಎಚ್.ಅಂಜನೇಯ ಅವರು 12 ಕೋಟಿ ರೂ.ಗಳ ವೆಚ್ಚದ ಭವನ ಒಂದು ವರ್ಷದೊಳಗೆ ನಿರ್ಮಾಣವಾಗಲಿದೆ ಎಂದು ಹೇಳಿದ್ದರು. ಆದರೆ ಕಟ್ಟಡ ನಿರ್ಮಾಣಕ್ಕೆ 2019 ರ ಅಂತ್ಯದವರೆಗೆ ಅಂದರೆ ಮೂರು ವರ್ಷಗಳು ಬೇಕಾಯಿತು. 2019 ರ ಅಂತ್ಯದ ವೇಳೆಗೆ ಕಾಮಗಾರಿಗಳು ಪೂರ್ಣಗೊಂಡಿದೆ. 2020 ಕಳೆದು 2021 ಕ್ಕೆ ಕಾಲಿರಿಸಿದ್ದರೂ ಇನ್ನೂ ಕೂಡಾ ಕಟ್ಟಡದ ಉದ್ಘಾಟನೆ ನಡೆದಿಲ್ಲ.
ದಲಿತ ಸಂಘಟನೆಗಳ ತೀವ್ರ ಬೇಡಿಕೆಯ ಪರಿಣಾಮವಾಗಿ, ಅಂದಿನ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಇಲ್ಲಿನ ದೇರೆಬೈಲ್ ವಾರ್ಡ್ನಲ್ಲಿ 1.61 ಎಕರೆ ಭೂಮಿಯನ್ನು ಈ ಕಟ್ಟಡ ನಿರ್ಮಾಣ ಯೋಜನೆಗಾಗಿ ಮೀಸಲಿಟ್ಟಿದ್ದರು.
ಕಟ್ಟಡದ ಒಟ್ಟು ಯೋಜನಾ ವೆಚ್ಚ 17.82 ಕೋಟಿ ರೂ. ಆಗಿದೆ. ಸರ್ಕಾರ 12 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದರೆ, ನಗರ ಪಾಲಿಕೆಯು 2.5 ಕೋಟಿ ರೂ. ಮಂಜೂರು ಮಾಡಿತು. ಸಮಾಜ ಕಲ್ಯಾಣ ಇಲಾಖೆಯು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಗೆ ಅನುದಾನ ಕೋರಿ ಪತ್ರ ಬರೆದಿದ್ದರೂ ಅವರು ಹಣ ನೀಡಲು ನಿರಾಕರಿಸಿದರು. ನಿರ್ಮಾಣ ವೆಚ್ಚ ಬಾಕಿ ಉಳಿದಿರುವ ಕಾರಣ ಕಟ್ಟಡವನ್ನು ಇನ್ನೂ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿಲ್ಲ.
ಆಕರ್ಷಕ ವಿನ್ಯಾಸದೊಂದಿಗಿನ ಆಕರ್ಷಣೀಯ ಕಟ್ಟಡವು ಉತ್ತಮವಾಗಿ ನಿರ್ಮಾಣಗೊಂಡಿದೆ. ಇದನ್ನು ವಿವಾಹ ಸಮಾರಂಭ, ಇತರೆ ಕಾರ್ಯಕ್ರಮ ಹಾಗೂ ನಾಟಕ ಚಟುವಟಿಕೆಗಳಿಗೆ ಬಳಸಬಹುದಾಗಿದೆ. ಈಗ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮತ್ತು ಮಾರುಕಟ್ಟೆ ರಸ್ತೆಯಲ್ಲಿರುವ ಮಂಗಳೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ವಿದ್ಯಾರ್ಥಿಗಳಿಗೆ ಸುಸಜ್ಜಿತ ಗ್ರಂಥಾಲಯ ಮತ್ತು ತರಬೇತಿ ಕೇಂದ್ರವನ್ನು ಇಲ್ಲಿರುತ್ತದೆ.
ಶಾಸಕ, ವೇದವ್ಯಾಸ್ ಕಾಮತ್, ಅವರು ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಶೀಘ್ರದಲ್ಲೇ ಕಟ್ಟಡವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳು ಮುಂದುವರೆದಿದೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.