ಮಂಗಳೂರು, ಜು 03: ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ನೇಮಕವಾಗಿದ್ದಾರೆ. ಇವರನ್ನು ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಕ್ರೈಸ್ತರ ಧಾರ್ಮಿಕ ಗುರು ಪೋಪ್ ಫ್ರಾನ್ಸಿಸ್ ಇವರು ನೇಮಕ ಮಾಡಿದ್ದಾರೆ. ಭಾರತೀಯ ಸಮಯ ಅಪರಾಹ್ನ 3.30 ಗಂಟೆಗೆ ವ್ಯಾಟಿಕನ್, ದೆಹಲಿ ಮತ್ತು ಮಂಗಳೂರಿನಲ್ಲಿ ಏಕಕಾಲದಲ್ಲಿ ಈ ಘೋಷಣೆ ಮಾಡಲಾಯಿತು.
ಮಂಗಳೂರು ಕಿರೆಂ ಮೂಲದ ಇವರು ಪ್ರಸ್ತುತ ರೋಮಿನ ಫೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾನಿಲಯದಲ್ಲಿ ದೇವತಾಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿರುವ ಸೇವೆಸಲ್ಲಿಸುತ್ತಿದ್ದಾರೆ.
1964 ಎಪ್ರಿಲ್ 27 ರಂದು ಜನಿಸಿದ ಇವರು 1991 ಮೇ 06 ರಂದು ಬಿಜಯ್ ಚರ್ಚ್ನಲ್ಲಿ ಅಂದಿನ ಬಿಷಪ್ ಸಾಲ್ವಾದೊರ್ ಡಿಸೋಜ ಇವರಿಂದ ಗುರು ದೀಕ್ಷೆ ಪಡೆದು ಬಳಿಕ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಹಾಗೂ ಮಂಗಳೂರಿನ ಮಿಲಾಗ್ರಿಸ್ ಚರ್ಚ್ಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಉನ್ನತ ವ್ಯಾಸಂಗಕ್ಕಾಗಿ ರೋಮ್ಗೆ ತೆರಳಿದ ಅವರು ಬೈಬಲ್ ಅಧ್ಯಯನದಲ್ಲಿ 2005ರಲ್ಲಿ ಫೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಬಳೀಕ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು `ದಿ ಚರ್ಚ್ : ಮಿಸ್ಟರಿ ಆಫ್ ಲವ್ ಎಂಡ್ ಕಮ್ಯೂನಿಯನ್' ಪುಸ್ತಕ ಬರೆದಿದ್ದಾರೆ.
ಹಿಂದಿನ ಬಿಷಪ್ ಎಲೋಶಿಯಸ್ ಪಾವ್ಲ್ ಡಿಸೋಜ ಇವರು ಹಲವಾರು ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಲಿದ್ದು, ನೂತನ ಬಿಷಪರ ಅಧಿಕಾರ ಸ್ವೀಕಾರ ತನಕ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.