ಮಂಜೇಶ್ವರ, ಜ.20 (DaijiworldNews/HR): ಉತ್ತರಪ್ರದೇಶ ಮೂಲದ ಕಾರ್ಮಿಕನೋರ್ವನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರು ಎಂಬಲ್ಲಿ ನಡೆದಿದ್ದು, ನಿಗೂಢ ಸಾವಿನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೃತಪಟ್ಟವರನ್ನು ವಿದ್ಯುತ್ ಕಂಬ ತಯಾರಿ ಘಟಕದಲ್ಲಿ ಕಾರ್ಮಿಕನಾಗಿದ್ದ ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ.
ಎರಡು ದಿನಗಳಿಂದ ನಾಪತ್ತೆಯಾಗಿದ್ದ ಇವರ ಮೃತದೇಹ ಮಂಗಳವಾರ ಸಂಜೆ ಕುಂಜತ್ತೂರು ಅಂಬಿತ್ತಡಿ ಎಂಬಲ್ಲಿನ ಖಾಸಗಿ ವ್ಯಕ್ತಿಯೋರ್ವರ ಕೆರೆಯಲ್ಲಿ ಪತ್ತೆಯಾಗಿತ್ತು.
ದುರ್ವಾಸನೆ ಬಂದ ಹಿನ್ನಲೆಯಲ್ಲಿ ಪರಿಸರವಾಸಿಗಳು ಗಮನಿಸಿದಾಗ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ತಲೆಯಲ್ಲಿ ಗಾಯ ಕಂಡು ಬಂದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ನೈಜ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.