ಉಡುಪಿ, ಜ.20 (DaijiworldNews/MB) : ಕಳೆದ 30 ವರ್ಷಗಳಿಂದ ವಿದ್ಯಾದಾನ ಮಾಡುತ್ತಿರುವ ಹಿರಿಯಡ್ಕದ ಪಂಚನಬೆಟ್ಟುವಿನಲ್ಲಿರುವ ವಿದ್ಯಾವರ್ಧಕ ಅನುದಾನಿತ ಪ್ರೌಢಶಾಲೆ ಇದೀಗ ಮುಚ್ಚುವ ಭೀತಿಯಲ್ಲಿದೆ. ಸ್ವತಃ ಶಿಕ್ಷಣ ಇಲಾಖೆಯೇ ಇದಕ್ಕೆ ಪ್ರೇರಪಣೆ ನೀಡುತ್ತಿದೆ ಎಂಬುದು ಪಂಚನಬೆಟ್ಟುವಿನಲ್ಲಿರುವ ವಿದ್ಯಾವರ್ಧಕ ಸಮಿತಿಯವರ ಅರೋಪವೂ ಕೂಡ. 1991ರಲ್ಲಿ ಸ್ಥಾಪಿತವಾದ ಈ ಶಾಲೆ 18 ವರ್ಷ ಸರಕಾರದ ಅನುದಾನವಿಲ್ಲದೆ, ದಾನಿಗಳಿಂದ ಸ್ಥಳೀಯರ ಸಹಕಾರದಿಂದ ಇಂದಿನವರೆಗೂ ನಡೆದು ಬಂದಿದೆ.








ಉಡುಪಿ ನಗರದಿಂದ 15 ಕಿ.ಮಿ ದೂರದಲ್ಲಿದೆ ಹಿರಿಯಡ್ಕ. ಇದು ನಿಧಾನವಾಗಿ ಪ್ರಗತಿಯತ್ತ ಸಾಗುತ್ತಿರುವ ಪ್ರದೇಶ. ಇನ್ನು ಪಂಚನಬೆಟ್ಟುವಿಗೆ ಹಿರಿಯಡ್ಕದಿಂದ 10 ಕಿ.ಮಿ. ಸಾಗಿ ಬರಬೇಕು. ಇಂದಿಗೂ ಸುತ್ತಲೂ ಕಾಡು, ಬಸ್ಸಿನ ವ್ಯವಸ್ಥೆಯೂ ಇಲ್ಲ. ಮಕ್ಕಳು ಬರಬೇಕಾದರೆ ಕಲ್ಲು ಕಾಡು ಹಾದಿಯನ್ನು ದಾಟಿ ಬರಬೇಕು. ಈಗ ಶಾಲೆಯು ಕಾಡು ಪ್ರದೇಶವಾದ ಕುಯಿಲಾಡಿ, ಸಾಣೆಕಲ್ಲು, ತೋಟ, ಕುಳೇದು, ಕಣಜಾರು, ಸಾಗು, ಪೆಲ್ತತೂರುಗಳನ್ನೊಳಗೊಂಡ ಸು. 15 ಕಿ.ಮಿ ವ್ಯಾಪ್ತಿ ಪ್ರದೇಶದಲ್ಲಿ ಇನ್ಯಾವುದೇ ಶಾಲೆಗ|ಳು ಇರುವುದಿಲ್ಲ. ಎಂಟನೇ ತರಗತಿಗೆ 25 ರಿಂದ 30 ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡುವ ಕೆಲಸ ನಡೆಯುತ್ತಿದೆ. ಆದರೆ ಶೈಕ್ಷಣಿಕ ಕೇಂದ್ರಗಳ ದಾಖಲಾತಿ ಕಡಿಮೆಯಾಗುತ್ತಿರುವುದರಿಂದ ಮುಚ್ಚಲ್ಪಡುವ ಕನ್ನಡ ಸರಕಾರಿ ಶಾಲಾ ಪಟ್ಟಿಗೆ ಸೇರ್ಪಡೆಯಾಗಿದೆ ಎನ್ನುವುದು ವಿಷಾದನೀಯ.
ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ವಸತಿ ನಿಲಯವನ್ನು ಆರಂಭಿಸಲಾಯಿತು. ಬೇರೆ ಜಿಲ್ಲೆಯಿಂದ ಬಂದ ಮಕ್ಕಳಿಗೆ ಈ ವಸತಿ ನಿಲಯದಲ್ಲಿ ಆಶ್ರಯ ಪಡೆದು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಅದರೆ ಇದನ್ನೇ ನೆಪವಾಗಿಟ್ಟುಕೊಂಡು ಕಳೆದ ವರ್ಷ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ ಶೇಷ ಶಯನ ಕಾರಿಂಜೆಯವರು ಮತ್ತು ಉಡುಪಿ ಬಿಇಓ ರವರು ಶಾಲೆಯನ್ನು ಮುಚ್ಚುವ ಹುನ್ನಾರ ನಡೆಸಿದ್ದಾರೆ ಎಂದು ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಎ ನರಸಿಂಃರವರು ಬಹಿರಂಗವಾಗಿ ಆರೋಪ ಮಾಡಿದ್ದಾರೆ.
ಈ ಶಾಲೆಗೆ ಒಂದು ವರ್ಷದ ಅವಧಿಗೆ ಮಾನ್ಯತೆ ನವೀಕರಿಸಲು ಸರ್ಕಾರ ಅನುಮತಿ ನೀಡಿ ಡಿಸೆಂಬರ್ 6, 2020 ರಂದು ಸರಕಾರದ ನಿರ್ದೇಶನ ಬಂದಿತ್ತು. ಆದಾಗ್ಯೂ ಬೋಧನಾ ಸಿಬ್ಬಂದಿಗಳಿಗೆ ನಿಯಾಮಾನುಸಾರ ವೇತನ ನೀಡದೆ ಅಲ್ಲಿನ ಉಪನ್ಯಾಸಕರನ್ನು ಉಡುಪಿ ಶಿಕ್ಷಣ ವಲಯಾಧಿಕಾರಿ ಸತಾಯಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಜುಲೈ 30 ಕಳೆದ ವರ್ಷ ಶಿಕ್ಷಣಾಧಿಕಾರಿ ಮಂಜುಳಾ ಕೆ ರವರು, 3 ಶಿಕ್ಷಕರನ್ನು ಅವರ ಕಛೇರಿಗೆ ಕರೆಸಿ ಶಾಲೆ ಬಿಡುವಂತೆ ಆದೇಶ ನೀಡಿರುವ ಬಗ್ಗೆಯೂ ಅರೋಪ ಮಾಡಿದ್ದಾರೆ. ಮೊದಲ ಕೆಲಸವಿಲ್ಲದೇ ಹೈರಾಣಾಗಿದ್ದ ಉಪನ್ಯಾಸಕರಿಗೆ ಈಗ ಬೇರೆಡೆಗೆ ವರ್ಗಾವಣೆಯ ಶಿಕ್ಷೆ ಸಿಕ್ಕಂತಾಗಿದೆ. ರೀತಿ ಶಿಕ್ಷಣ ಇಲಾಖೆಯ ಒತ್ತಾಯದಿಂದ ಅನೇಕ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿ ಹೋಗುತ್ತಿವೆ. ಮೂವರು ಶಿಕ್ಷಕರಲ್ಲಿ ಇಬ್ಬರು ವರ್ಗಾವಣೆ ಗೊಂಡಿದ್ದಾರೆ, ವರ್ಗಾವಣೆ ಆಗದವರಿಗೆ ಕಳೆದ ಏಳು ತಿಂಗಳಿನಿಂದ ವೇತನ ನೀಡದೆ ಸತಾಯಿಸುತ್ತಿದ್ದಾರೆ.
ಕೋವಿಡ್ನಿಂದಾಗಿ ಒಂದು ಶೈಕ್ಷಣಿಕ ವರ್ಷವೇ ಅತಂತ್ರವಾಗಿದೆ. ಅದರಲ್ಲಿಯೂ ಎಸ್ಎಸ್ಎಲ್ಸಿ ಮಕ್ಕಳಿಗೆ ಇನ್ನೂ ಕೂಡ ಪಠ್ಯ ಪುಸ್ತಕವೇ ಲಭಿಸಿಲ್ಲ. ಇನ್ನು ಇಲ್ಲಿನ ವಿದ್ಯಾರ್ಥಿಗಳು ಬೇರೆಡೆ ಹೋಗಲು ಮತ್ತಷ್ಟು ದೂರ ಹೋಗಬೇಕಾದುದರಿಂದ ಹಿಂಜರಿಯುತ್ತಿದ್ದಾರೆ. ಪೋಷಕರು ಕೂಡ ಮಕ್ಕಳನ್ನು ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ದೂರ ಕಳುಹಿಸಲು ಒಪ್ಪುತ್ತಿಲ್ಲ.
ಶಾಲೆ ಮುಚ್ಚುವ ವಿಚಾರವಾಗಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲಾಲಾಜಿ ಆರ್ ಮೆಂಡನ್ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ತಿಳಿಸಿದ್ದು ಅಕ್ಟೋಬರ್ 2020 ರಲ್ಲಿ ಹಾಗೆಯೇ ಶಾಲೆ ಮುಂದುವರಿಸುವಂತೆ ಆದೇಶ ಬಂದಿರುತ್ತದೆ ಅದೇ ರೀತಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನ ಪಡುವುದಾಗಿ ಸಂಘದ ಅಧ್ಯಕ್ಷ ನರಸಿಂಹ ತಿಳಿಸಿದ್ದಾರೆ. ಆದರೆ ಇದುವರೆಗೂ ಉಡುಪಿ ಶಿಕ್ಷಣ ಇಲಾಖೆಯಿಂದ ನವೀಕರಿಸಿದ ಆದೇಶ ಬಂದಿರುವುದಿಲ್ಲ. ಹಾಗಾಗಿ ಪಂಚನಬೆಟ್ಟು ಶಾಲೆಯನ್ನು ಖುದ್ದು ಶಿಕ್ಷಣ ಇಲಾಖೆಯೇ ಮುಚ್ಚುವ ಹುನ್ನಾರ ನಡೆಯುತ್ತಿದೆಯೇ ಅನ್ನೋದು ಸಂಶಯ ಹುಟ್ಟಿಸುತ್ತಿದೆ.