ಸುಳ್ಯ, ಜ.20 (DaijiworldNews/MB) : ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಾಲ್ಸೂರು ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ಸೇರಿ ಮೂವರನ್ನು ಪಂಜ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ಜ.19 ರಂದು ಅಮರಮುಡ್ನೂರು ಗ್ರಾಮದ ದೊಡ್ಡಿಹಿತ್ಲು ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಿರಾಲ್ಬೋಗಿ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಮಾಡಿ ಇಟ್ಟಿರುವುದಲ್ಲದೆ, ಭಾಗಶಃ ಸೊತ್ತುಗಳನ್ನು ಸಾಗಾಟ ಮಾಡಿರುವ ಪ್ರಕರಣವನ್ನು ಪಂಜ ವಲಯಾರಣ್ಯಾಧಿಕಾರಿಗಳ ತಂಡ ಬೇಧಿಸಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದಲ್ಲಿ 26 ಕಿರಾಲ್ಬೋಗಿ ದಿಮ್ಮಿಗಳು, ಒಂದು ಜೇಸಿಬಿ ಯಂತ್ರ, ಒಂದು ಬೊಲೆರೋ ವಾಹನ ವಶಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಜಾಲ್ಸೂರು ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್ ನಡುವಡ್ಕ, ಮಹಮ್ಮದ್ ಸೋಯಾಬ್ ದೇಲಂಪಾಡಿ, ಅಭಿಲಾಷ್ ಗೌಡ ಅರಕಲಗೂಡು ಎಂಬವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ವಶಪಡಿಸಿದ ದಿಮ್ಮಿಗಳು ಹಾಗೂ ವಾಹನಗಳ ಒಟ್ಟು ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ಸ್ಥಳದಿಂದ ಸಾಗಾಟವಾಗಿದ್ದ ಕಿರಾಲ್ಬೋಗಿಯ 27 ದಿಮ್ಮಿಗಳು, ಒಂದು ಲಾರಿಯನ್ನು ಕೇರಳ ಗಡಿ ಭಾಗದಲ್ಲಿ ವಶಪಡಿಸಲಾಗಿದೆ. ಇದರ ಮೌಲ್ಯ 5 ಲಕ್ಷ ಎಂದು ಅಂದಾಜಿಸಲಾಗಿದೆ.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ಅವರ ನಿರ್ದೇಶನದಂತೆ ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟಿನ್ ಪಿ ಸೋನ್ಸ್ ಅವರ ಮಾರ್ಗದರ್ಶನದಲ್ಲಿ ಪಂಜ ವಲಯ ಅರಣ್ಯಾಧಿಕಾರಿ ಮಂಜುನಾಥ ಎನ್. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕಾರ್ಯಚಾರಣೆಯಲ್ಲಿ ಪಂಜ ಉಪವಲಯಾಣ್ಯಾಧಿಕಾರಿಗಳಾದ ಸಂತೋಷ್ ಕೆ., ಯಶೋಧರ ಕೆ., ಅಜಿತ್ಕುಮಾರ್, ಮಧನ್ ಬಿ.ಕೆ, ರವಿಪ್ರಕಾಶ್, ಸುನಿಲ್ಕುಮಾರ್ ಬಿ.ಯಿ, ಸಿಬ್ಬಂದಿಗಳಾದ ವಿಶ್ವನಾಥ ಗೌಡ, ಮಹೇಶ್ ಕೆ.ಕೊಳ್ಳಿ, ವೆಂಕಟ್ರಮಣ, ವಿಜಯಕುಮಾರ್, ಭರಮಪ್ಪ ಹೆಚ್, ಧರ್ನಪ್ಪ, ಕೆ.ಎಸ್.ಸುಬ್ರಹ್ಮಣ್ಯ, ದಿನೇಶ್, ಗಣೇಶ್ ಹೆಗ್ಡೆ, ವಾಹನ ಚಾಲಕ ಮೋಹನ್, ಪದ್ಮ ಕುಮಾರ್ ಸಹಕರಿಸಿದ್ದರು.