ಮಂಗಳೂರು, ಜ.21 (DaijiworldNews/MB) : ಕೂಳೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಆರು ಪಥಗಳನ್ನು ಹೊಂದಿರುವ ಎರಡು ಏಕಮುಖ ಸೇತುವೆಗಳ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಈ ಬಗ್ಗೆ ಆಂಗ್ಲ ದೈನಿಕ ಪತ್ರಿಕೆಯೊಂದು ವರದಿ ಮಾಡಿದೆ. ಈಗಿರುವ ಎರಡು ಸೇತುವೆಗಳ ಮಧ್ಯದಲ್ಲಿ ಆರು ಪಥದ ಸೇತುವೆಯ ನಿರ್ಮಾಣ ಕಾರ್ಯವನ್ನು ಶಿಂಧೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ 70 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿದೆ. ಇದು 18 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಸೇತುವೆಯು ಮಂಗಳೂರು ಉಡುಪಿ ನಡುವೆ ಸರಾಗ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.
ಮಂಗಳೂರು ಕಡೆಗೆ ಎಡಭಾಗದಲ್ಲಿರುವ ಎನ್ಎಚ್ 66 ರಲ್ಲಿ ಸೇತುವೆಯನ್ನು 1952 ರಲ್ಲಿ ನಿರ್ಮಿಸಲಾಗಿತ್ತು. ಗುಂಡಿಗಳು ಅಧಿಕವಾದ ಕಾರಣ ಕಳೆದ ವರ್ಷ ಈ ಸೇತುವೆಯನ್ನು ಮುಚ್ಚಿ ಜಿಲ್ಲಾಡಳಿತವು ಕಾಮಗಾರಿ ನಡೆಸಿತ್ತು.
ಈಗಿರುವ ಎರಡು ಸೇತುವೆಗಳ ಮಧ್ಯದಲ್ಲಿ ಆರು ಪಥದ ಸೇತುವೆ ನಿರ್ಮಾಣಕ್ಕಾಗಿ ವಿವರವಾದ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.