ಮೂಡುಬಿದಿರೆ, ಜು 04 : ಇಲ್ಲಿನ ಸಮೀಪದ ಪುಚ್ಚೆಮೊಗರಿನಲ್ಲಿ ತಂದೆಯೇ ತನ್ನ 14 ವರ್ಷದ ಮಗಳನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಆರೋಪಿ ತಂದೆ ವಿರುದ್ಧ ಮೂಡುಬಿದಿರೆ ಪೊಲೀಸರು ಪೋಕ್ಸೊ ಕಾಯ್ದೆ ದಾಖಲಿಸಿದ್ದಾರೆ.
ಆರೋಪಿಯನ್ನು ಕೇರಳ ಮೂಲದ ವಿಕ್ರಂ ಪಿಳ್ಳೆ ಎಂದು ಗುರುತಿಸಲಾಗಿದೆ. ಪುಚ್ಚೆಮೊಗರಿನ ಗಿರಣಿಯೊಂದರಲ್ಲಿ ಈತ ಕೆಲಸ ಮಾಡುತ್ತಿದ್ದ. ಜಾರ್ಖಂಡ ಮೂಲದ ತನ್ನ ಪತ್ನಿ ಹಾಗೂ ಮಗಳ ಜತೆ ಈ ಕುಟುಂಬ ಪುಚ್ಚೆಮೊಗರಿನ ಮನೆಯೊಂದರಲ್ಲಿ ವಾಸ್ತವ್ಯವಿದೆ. ಈತನ 14 ವರ್ಷದ ಮಗಳು ಇತ್ತೀಚೆಗೆ ರಾತ್ರಿ ಮನೆಯ ಹೊರಗಡೆ ಮಲಗುತ್ತಿದ್ದುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಪೊಲೀಸರು ಆಕೆಯನ್ನು ಪೊಲೀಸ್ಠಾಣೆಗೆ ಕರೆತಂದು ವಿಚಾರಿಸಿದಾಗ ಅಲ್ಲಿ ಸರಿಯಾದ ಕಾರಣ ತಿಳಿಸದಾಗ ಆಕೆಯನ್ನು ಮಂಗಳೂರಿನ ಮಕ್ಕಳ ರಕ್ಷಣೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆಕೆಯನ್ನು ವಿಚಾರಿಸಿದಾಗ ತನ್ನ ತಂದೆಯಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂಬ ವಿಚಾರವನ್ನು ಬಾಯಿಬಿಟ್ಟಳೆನ್ನಲಾಗಿದೆ. ಈ ವಿಷಯವನ್ನು ಮಕ್ಕಳ ರಕ್ಷಣೆ ಕೇಂದ್ರದ ಅಧಿಕಾರಿಗಳು ಮೂಡುಬಿದಿರೆ ಪೊಲೀಸರಿಗೆ ತಿಳಿಸಿದ ನಂತರ ಪೊಲೀಸರು ವಿಚಾರಣೆ ನಡೆಸಿ ಆರೋಪಿ ವಿಕ್ರಮ ಪಿಳ್ಳೆ ವಿರುದ್ಧ ಪೊಕ್ಸೊ ಕಾಯ್ದೆ ದಾಖಲಿಸಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.