ಕಾಸರಗೋಡು, ಜ.21 (DaijiworldNews/PY): ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಎರಡು ಕಿಲೋ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಬೆಳಗಾವಿಯ ಇಬ್ಬರನ್ನು ಬಂಧಿಸಲಾಗಿದೆ.

ಸಾಂದರ್ಭಿಕ ಚಿತ್ರ
ಬಂಧಿತರನ್ನು ಬೆಳಗಾವಿ ಸಹಾಪುರದ ತುಷಾರ್ (27) ಮತ್ತು ಜ್ಯೋತಿ ರಾಂ (23) ಎಂದು ಗುರುತಿಸಲಾಗಿದೆ.
ಕಣ್ಣೂರು ಕಸ್ಟಮ್ಸ್ಗೆ ಲಭಿಸಿದ ಖಚಿತ ಮಾಹಿತಿಯಂತೆ, ಗುರುವಾರ ಮಧ್ಯಾಹ್ನ ಕಣ್ಣೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರನ್ನು ಪಳ್ಳಿಕೆರೆ ಟೋಲ್ ಗೇಟ್ ಬಳಿ ತಪಾಸಣೆ ನಡೆಸಿದಾಗ ಅಕ್ರಮ ಚಿನ್ನಾಭರಣ ಪತ್ತೆಯಾಗಿದೆ. ಕಾರಿನ ಹಿಂಬದಿಯ ಸೀಟಿನಡಿಯಲ್ಲಿ ರಹಸ್ಯ ರಂಧ್ರ ತಯಾರಿಸಿ ಅದರಲ್ಲಿ ಚಿನ್ನಾಭರಣವನ್ನು ಬಚ್ಚಿಟ್ಟು ಸಾಗಾಟ ಮಾಡಲಾಗುತ್ತಿತ್ತು.
ಕಣ್ಣೂರು ಕಸ್ಟಮ್ಸ್ನ ಸಹಾಯಕ ಆಯುಕ್ತ ಇ.ವಿ. ವಿಕಾಸ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದ್ದು, ಕಾಸರಗೋಡು ಕಸ್ಟಮ್ಸ್ ಆಯುಕ್ತ ಪಿ.ಪಿ.ರಾಜೀವ್, ಸಿಬ್ಬಂದಿಗಳಾದ ಕೆ. ಚಂದ್ರಶೇಖರ, ಕೆ.ಆನಂದ ಕೊರಕ್ಕೋಡ್, ಎಂ. ವಿಶ್ವನಾಥ ಪಾಲ್ಗೊಂಡಿದ್ದರು.
ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ 6.20 ಕೋಟಿ. ರೂ. ಮೌಲ್ಯದ ಚಿನ್ನಾಭರವನ್ನು ಕಸ್ಟಮ್ಸ್ ವಶಪಡಿಸಿಕೊಂಡಿತ್ತು.