ಮಂಗಳೂರು, ಜ.22 (DaijiworldNews/PY): ಕೆಲವು ದಿನಗಳ ಹಿಂದೆ ನಗರದಲ್ಲಿ ಪೊಲೀಸರ ಕೊಲೆಗೆ ಯತ್ನ ನಡೆದಿದ್ದು, ಈ ಘಟನೆಯ ಹಿಂದೆ ಪಿಎಫ್ಐ ಹಾಗೂ ಎಸ್ಡಿಪಿಐ ಕೈವಾಡ ಇರುವುದಾಗಿ ಆರೋಪ ಮಾಡಲಾಗಿದೆ.

ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ವಿಶ್ವ ಹಿಂದೂಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರು, "ನಗರದಲ್ಲಿ 2019ರ ಡಿಸೆಂಬರ್ನಲ್ಲಿ ನಡೆದ ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರ ತೀರಿಸಲು ಪೊಲೀಸರ ಕೊಲೆಗೆ ಯತ್ನಿಸಿದ್ದು ಎಸ್ಡಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತರು. ಬಂಧಿತ ಆರೋಪಿಗಳೆಲ್ಲರೂ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗೆ ಸೇರಿದವರಾಗಿದ್ದಾರೆ" ಎಂದು ಹೇಳಿದ್ದಾರೆ.
"ಕುದ್ರೋಳಿಯ ನಾಲ್ಕು ಮಂದಿ, ಬಜ್ಪೆ ಹಾಗೂ ಬಂಟ್ವಾಳದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂರು ಸ್ಥಳಗಳೂ ಕೂಡಾ ಪಿಎಫ್ಐ ಹಾಗೂ ಎಸ್ಡಿಪಿಐ ಕೇಂದ್ರಗಳಾಗಿವೆ. ಬಂಟ್ವಾಳ ಅವರ ಮೂಲ ಕೇಂದ್ರವಾದ ಕಾರಣದಿಂದ ಇದು ಯೋಜಿತ ದಾಳಿಯಾಗಿದೆ. ಈ ಕೃತ್ಯಕ್ಕೆ ಪಿಎಫ್ಐ ಸಣ್ಣ ಯುವಕರನ್ನು ಬಳಸಿಕೊಂಡಿದೆ. ನೈಟ್ ರೇವಟ್ ಮಾತ್ರೆಯನ್ನು ಈ ಯುವಕರಿಗೆ ಕೊಡಲಾಗಿದ್ದು, ಮಾಯಾ ಗ್ಯಾಂಗ್ ಎನ್ನುವ ಹೆಸರಿನಲ್ಲಿ ಈ ಕೃತ್ಯವೆಸಗಿದ್ದಾರೆ" ಎಂದಿದ್ದಾರೆ.
"ಪೊಲೀಸರನ್ನು ಹತ್ಯೆಗೈಯಲು ವ್ಯವಸ್ಥಿತವಾದ ಯೋಜನೆ ಮಾಡಲಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಈ ವಿಷಯದ ಬಗ್ಗೆ ಆಳವಾದ ತನಿಖೆ ನಡೆಸಬೇಕಾಗಿದೆ. ಈ ಕೃತ್ಯಕ್ಕೆ ಆರ್ಥಿಕ ಹಾಗೂ ಆಶ್ರಯ ನೀಡಿದವರನ್ನು ಕೂಡಾ ಬಂಧಿಸಬೇಕು. ಇದರಲ್ಲಿ ದ.ಕ ಜಿಲ್ಲೆಯ ಎಸ್ಡಿಪಿಐ ಹಾಗೂ ಪಿಎಫ್ಐ ನಾಯಕರ ಶೇ.100ರಷ್ಟು ಕೈವಾಡವಿದೆ. ಅವರ ಸೂಚನೆಯಿಲ್ಲದೆ ಈ ಕೃತ್ಯ ನಡೆಸುವುದು ಅಸಾಧ್ಯ. ಎಸ್ಡಿಪಿಐ ಹಾಗೂ ಪಿಎಫ್ಐ ನಾಯಕರನ್ನು ಕೂಡಲೇ ಬಂಧಿಸಬೇಕು" ಎಂದು ಒತ್ತಾಯಿಸಿದ್ದಾರೆ.