ಮಂಗಳೂರು, ಜ.22 (DaijiworldNews/PY): ಕಾರ್ಕಳ ಹಿರ್ಗಾನದ ಶ್ರೀ ಕುಂದೇಶ್ವರ ಕ್ಷೇತ್ರದಿಂದ ನೀಡಲಾಗುವ ಶ್ರೀಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಈ ಬಾರಿ ಸೌಕೂರು ಮೇಳದ ಭಾಗವತ ಡಾ. ರವಿಕುಮಾರ್ ಸೂರಾಲು ಅವರನ್ನು ಆಯ್ಕೆ ಮಾಡಲಾಗಿದೆ.


"ಪ್ರಶಸ್ತಿ ಪ್ರದಾನ ಸಮಾರಂಭ ಜ.23ರಂದು ರಾತ್ರಿ 9 ಗಂಟೆಗೆ ಹಿರ್ಗಾನ ಶ್ರೀಕುಂದೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಇದೇ ಸಂದರ್ಭ ಸೌಕೂರು ಮೇಳದವರಿಂದ ಪುಷ್ಪಚಂದನ ಯಕ್ಷಗಾನ ಬಯಲಾಟ ನಡೆಯಲಿದೆ" ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಶ್ರೀಕ್ಷೇತ್ರದಲ್ಲಿ ಜ. 22ರಂದು ಮಹೋತ್ಸವ, ಅನ್ನಸಂತರ್ಪಣೆ, ರಂಗಪೂಜೆ, ಭೂತ ಬಲಿ, ನೇಮೋತ್ಸವ, ಜ.23ರಂದು ಸಂಪ್ರೋಕ್ಷಣೆ ನಡೆಯಲಿದೆ.
ರವಿ ಸೂರಾಲು ಹಿನ್ನೆಲೆ:
ದಿ. ಕಾಳಿಂಗ ನಾವುಡ, ಗೋಪಾಲ ಗಾಣಿಗ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ರವಿ ಕುಮಾರ್, ಹಂಗಾರಕಟ್ಟೆ ಕೇಂದ್ರದಲ್ಲಿ ಕೆ.ಪಿ.ಹೆಗಡೆ ಅವರಿಂದ ಭಾಗವತಿಕೆ ಕಲಿತರು. ಈಗ ಸೌಕೂರು ಮೇಳದ ಪ್ರಧಾನ ಭಾಗವತರಾಗಿದ್ದು, ಅವರು ಸಾಲಿಗ್ರಾಮ, ಮಾರಣಕಟ್ಟೆ, ಬಗ್ವಾಡಿ, ಮಂದಾರ್ತಿ, ಕಮಲಶಿಲೆ ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ಸೂರಾಲು ಅವರು ಸ್ಯಾಕ್ಸೋಫೋನ್ ವಾದಕರೂ ಆಗಿದ್ದು, ಅವರ ವಾದನದ ಅನೇಕ ಧ್ವನಿ ಸುರುಳಿಗಳು ಲೋಕಾರ್ಪಣೆಗೊಂಡಿವೆ.